ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾ ಕಾಣಿಸಿಕೊಂಡಿರುವ ಸುದ್ದಿ ಬಹಿರಂಗವಾಗ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಕೊರೊನಾ ಶಾಕ್ ತಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂವರು ಸದಸ್ಯರಿಗೆ ಕೊರೊನಾ ಪಾಸಿಟಿವ್ ಆಗಿದೆ. ತಂಡದ ಮುಖ್ಯ ಕಾರ್ಯನಿರ್ವಾಹಕ ಕಾಶಿ ವಿಶ್ವನಾಥನ್, ಬೌಲಿಂಗ್ ಕೋಚ್ ಲಕ್ಷ್ಮಿಪತಿ ಬಾಲಾಜಿ ಮತ್ತು ತಂಡದ ಬಸ್ ಕ್ಲೀನರ್ ಕೊರೊನಾ ಸೋಂಕಿಗೊಳಗಾಗಿದ್ದಾರೆ. ತಂಡದ ಉಳಿದ ಆಟಗಾರರ ವರದಿ ನಕಾರಾತ್ಮಕವಾಗಿದೆ.
ಭಾನುವಾರ ನಡೆದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಸೋಮವಾರ ಮತ್ತೆ ಪರೀಕ್ಷೆ ನಡೆಸಲಾಗಿದೆ. ಈ ವರದಿ ಸಕಾರಾತ್ಮಕವಾಗಿ ಬಂದಲ್ಲಿ ಕಾಶಿ ವಿಶ್ವನಾಥನ್ ಮತ್ತು ಲಕ್ಷ್ಮಿಪತಿ ಬಾಲಾಜಿ ಅವರನ್ನು ಬಯೋ ಬಬಲ್ ನಿಂದ ಹೊರಗಿಡಲಾಗುವುದು. ಅವರು ತಮ್ಮನ್ನು ಪ್ರತ್ಯೇಕಿಸಿಕೊಳ್ಳಲಿದ್ದು, 10 ದಿನ ತಂಡದಿಂದ ಹೊರಗಿರಲಿದ್ದಾರೆ. ನಂತ್ರ ಮತ್ತೆ ಪರೀಕ್ಷೆ ನಡೆಯಲಿದೆ.
ಚೆನ್ನೈ, ಶನಿವಾರ ಮುಂಬೈ ತಂಡದ ವಿರುದ್ಧ ಸೋಲುಂಡಿತ್ತು. ಮೇ.5ರಂದು ರಾಜಸ್ತಾನ್ ರಾಯಲ್ಸ್ ವಿರುದ್ಧ ಪಂದ್ಯ ನಡೆಯಲಿದೆ. ಎಲ್ಲ ಆಟಗಾರರ ವರದಿ ನಕಾರಾತ್ಮಕವಾಗಿ ಬಂದಿದ್ದು, ಪಂದ್ಯದ ಮೇಲೆ ಇದ್ರಿಂದ ಯಾವುದೇ ಪರಿಣಾಮವಾಗುವುದಿಲ್ಲ. ಪಂದ್ಯ ನಿಗದಿಯಂತೆ ನಡೆಯಲಿದೆ ಎನ್ನಲಾಗ್ತಿದೆ.