ಐಪಿಎಲ್ ನ ಪ್ರಬಲ ತಂಡಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಂದು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ತಂಡ ಮೂರು ಬಾರಿ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ಆದ್ರೆ ಹಿಂದಿನ ಋತುವಿನಲ್ಲಿ ತಂಡದ ಪ್ರದರ್ಶನ ಉತ್ತಮವಾಗಿರಲಿಲ್ಲ. ಈ ಬಾರಿ ಉತ್ತಮ ಪ್ರದರ್ಶನ ನೀಡಲು ತಂಡ ಸಜ್ಜಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಮಸ್ಯೆ ಏನೆಂದರೆ ಹೆಚ್ಚಿನ ಆಟಗಾರರು ಸ್ಪರ್ಧಾತ್ಮಕ ಕ್ರಿಕೆಟ್ ಆಡ್ತಿಲ್ಲ. ಆಟಗಾರರು ಲಯಕ್ಕೆ ಬರಲು ಇದು ಅಡ್ಡಿಯಾಗ್ತಿದೆ. ಉತ್ತಮ ಪ್ರದರ್ಶನಕ್ಕಾಗಿ ಕಠಿಣ ಪರಿಶ್ರಮ ಅಗತ್ಯವಾಗುತ್ತದೆ. ಕೆಲ ಆಟಗಾರರಿಗೆ ಇದು ಕೊನೆ ಐಪಿಎಲ್ ಆಗುವ ಸಾಧ್ಯತೆಯಿದೆ.
ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. 2008 ರಿಂದ ಧೋನಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ನಿಷೇಧದ ಸಂದರ್ಭದಲ್ಲಿ ಧೋನಿ, ಪುಣೆ ತಂಡದ ನೇತೃತ್ವ ವಹಿಸಿದ್ದರು. ಧೋನಿಗೆ ಇದೇ ಕೊನೆ ಐಪಿಎಲ್ ಎನ್ನಲಾಗ್ತಿದೆ. ಮುಂದಿನ ಋತುವಿನಲ್ಲಿ ಧೋನಿ ಆಡುವುದು ಅನುಮಾನ ಎನ್ನಲಾಗ್ತಿದೆ.
42 ವರ್ಷವಾಗಿದ್ದರೂ ಇಮ್ರಾನ್ ತಾಹಿರ್ ಅದ್ಬುತ ಪ್ರದರ್ಶನ ನೀಡ್ತಿದ್ದಾರೆ. ಇಮ್ರಾನ್ ತಾಹಿರ್ ಒಬ್ಬ ಅನುಭವಿ ಬೌಲರ್. ಅತ್ಯುತ್ತಮ ಪ್ರದರ್ಶನಕ್ಕಾಗಿ ಇಮ್ರಾನ್ ತಾಹಿರ್ 2018 ರಲ್ಲಿ ಪರ್ಪಲ್ ಕ್ಯಾಪ್ ಪಡೆದರು. ಆದರೆ ಕಳೆದ ಋತುವಿನಲ್ಲಿ ಅವರು ಕೇವಲ ಮೂರು ಪಂದ್ಯಗಳನ್ನು ಆಡಿದ್ದರು. ಮುಂದಿನ ಋತುವಿನಲ್ಲಿ ಇಮ್ರಾನ್ ಆಡುವುದು ಅನುಮಾನ.
ಚೆನ್ನೈ ಸೂಪರ್ ಕಿಂಗ್ಸ್ ನ ಮತ್ತೊಬ್ಬ ಆಟಗಾರ ಡೇರೆನ್ ಬ್ರಾವೋ ಕೂಡ ಮುಂದಿನ ಋತುವಿನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದೆ. ಅತ್ಯುತ್ತಮ ಆಲ್‌ರೌಂಡರ್ ಆಗಿರುವ, ಬ್ರಾವೋ ಕಳೆದ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಬ್ರಾವೋ 140 ಪಂದ್ಯಗಳಲ್ಲಿ 153 ವಿಕೆಟ್ ಗಳಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ನ ಮತ್ತೊಬ್ಬ ಆಟಗಾರ ಸುರೇಶ್ ರೈನಾ, ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಧೋನಿ ಜೊತೆ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಸುರೇಶ್ ರೈನಾ, ಫಾರ್ಮ್ ಮತ್ತು ಫಿಟ್ನೆಸ್ ಗೆ ಹೆಣಗಾಡುತ್ತಿದ್ದಾರೆ. ಬಹುಶಃ ಅವರು ಈ ಋತುವಿನ ನಂತರ ಐಪಿಎಲ್‌ಗೆ ವಿದಾಯ ಹೇಳುವ ಸಾಧ್ಯತೆಯಿದೆ.