ಈ ವರ್ಷ ಯುಎಇನಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ. ಐಪಿಎಲ್ ಪಂದ್ಯಕ್ಕೂ ಮುನ್ನ ಕೊರೊನಾ ಹಿನ್ನಲೆಯಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಿಯಮ ಮುರಿದ್ರೆ ಶಿಕ್ಷೆ ವಿಧಿಸುವುದಾಗಿ ಬಿಸಿಸಿಐ ಹೇಳಿದೆ.
ಬಿಸಿಸಿಐ ಫ್ರಾಂಚೈಸಿಗಳಿಗೆ ನೀಡಿದ ಮಾಹಿತಿ ಪ್ರಕಾರ, ಪ್ರತಿ ಫ್ರಾಂಚೈಸಿ ವೈದ್ಯಕೀಯ ತಂಡ, ಆಟಗಾರರು ಹಾಗೂ ಸಿಬ್ಬಂದಿಯ ವೈದ್ಯಕೀಯ ಪ್ರಮಾಣಪತ್ರ ಹಾಗೂ ಮಾರ್ಚ್ 1ರ ನಂತ್ರದ ಪ್ರವಾಸದ ಮಾಹಿತಿಯನ್ನು ನೀಡಬೇಕಾಗುತ್ತೆ.
ಯುಎಇಗೆ ಹಾರುವ ಮೊದಲು ಎಲ್ಲ ಆಟಗಾರರ ಬಳಿ ಎರಡು ಕೊರೊನಾ ನೆಗೆಟಿವ್ ದಾಖಲೆ ಇರಬೇಕು. ಯುಎಇಯಲ್ಲಿ ಪ್ರತಿ ತಂಡಕ್ಕೂ ಪ್ರತ್ಯೇಕ ಹೊಟೇಲ್ ನೀಡಲಾಗಿದೆ. ಐದು ದಿನಕ್ಕೊಮ್ಮೆ ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಮೂರು ಬಾರಿ ನೆಗೆಟಿವ್ ಬಂದ ಮೇಲೆ ಆಟಗಾರರು ಬೇರೆ ಆಟಗಾರರ ಜೊತೆ ಬೆರೆಯಬಹುದು.
ಒಂದು ವೇಳೆ ಆಟಗಾರರಿಗೆ ಕೊರೊನಾ ಪಾಸಿಟಿವ್ ಬಂದಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕು. ನಂತ್ರ ಎರಡು ಬಾರಿ ಪರೀಕ್ಷೆ ನಡೆಸಲಾಗುವುದು. ಎಲ್ಲ ಆಟಗಾರರು ಹಾಗೂ ಫ್ರಾಂಚೈಸಿ ಸಿಬ್ಬಂದಿಗೆ ಇದು ಕಡ್ಡಾಯವಾಗಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಅನಿವಾರ್ಯವಾಗಿದೆ. ಎಲ್ಲರೂ ಒಟ್ಟಾಗಿ ಆಹಾರ ಸೇವಿಸುವ ಬದಲು ತಮ್ಮ ಕೋಣೆಯಲ್ಲಿ ಪ್ರತ್ಯೇಕವಾಗಿ ಆಹಾರ ಸೇವನೆ ಮಾಡಬೇಕು. ನಿಯಮ ಮುರಿದ್ರೆ ಶಿಕ್ಷೆಯಾಗಲಿದೆ.