ಐಪಿಎಲ್ ಪಂದ್ಯಾವಳಿಗಳು ಈ ಬಾರಿ ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಪಂದ್ಯಕ್ಕೂ ಮುನ್ನ 3 ಬಾರಿ ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆಯಲಿದೆ. ಇದು ಆಟಗಾರರಿಗೆ ಸವಾಲಾಗಿ ಪರಿಣಮಿಸಿದೆ. ಯಾಕೆಂದ್ರೆ ಕೊರೊನಾ ಪರೀಕ್ಷೆ ನಂತ್ರವೂ ಹೃದಯ ಪರೀಕ್ಷೆ ನಡೆಯಲಿದೆ.
ಇವುಗಳಲ್ಲಿ ಇಸಿಜಿ, ಎಕೋಕಾರ್ಡಿಯೋಗ್ರಫಿ ಮತ್ತು ಕಾರ್ಡಿಯಾಕ್ ಸ್ಟ್ರೆಸ್ ಟೆಸ್ಟ್ ಮತ್ತು ಕಾರ್ಡಿಯಾಕ್ ಎಂಆರ್ಐ ಸೇರಿವೆ. ಕೊರೊನಾ ನಂತ್ರ ಆಟಗಾರರು ಮೈದಾನಕ್ಕೆ ಮರಳಲು ಫಿಟ್ ಆಗಿದ್ದಾರಾ ಎಂಬುದನ್ನು ಈ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಹಾಗಾಗಿ ಒಮ್ಮೆ ಕೊರೊನಾ ಪಾಸಿಟಿವ್ ಆಗಿರುವ ಆಟಗಾರರ ಪರೀಕ್ಷಾ ವರದಿ ನಂತ್ರ ನೆಗೆಟಿವ್ ಬಂದ್ರೂ ಮೈದಾನಕ್ಕಿಳಿಯುವುದು ಸುಲಭವಾಗಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ನ 11 ಆಟಗಾರರು ಕ್ವಾರಂಟೈನ್ ನಲ್ಲಿದ್ದಾರೆ. ಅವರಿಗೆ 10, 13 ಮತ್ತು 14ನೇ ದಿನ ಕೊರೊನಾ ಪರೀಕ್ಷೆ ನಡೆಯಲಿದೆ. ಮೂರು ಪರೀಕ್ಷೆಯ ವರದಿ ನೆಗೆಟಿವ್ ಬಂದ್ಮೇಲೆ ಬೇರೆ ಆಟಗಾರರ ಜೊತೆ ಬೆರೆಯಲು ಅವಕಾಶ ಸಿಗಲಿದೆ. ಕೋವಿಡ್ ಪಾಸಿಟಿವ್ ಬಂದ ಆಟಗಾರರಿಗೆ ಹೃದಯ ಪರೀಕ್ಷೆ ಕಡ್ಡಾಯವಾಗಿದೆ. ಕೊರೊನಾ, ಹೃದಯ, ಮೂತ್ರಪಿಂಡ, ಶ್ವಾಸಕೋಶವನ್ನು ಹಾನಿ ಮಾಡಿ ದೇಹದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಸಂಶೋಧನೆಯಿಂದ ಪತ್ತೆಯಾಗಿದೆ. ಕೊರೊನಾ ಗೆದ್ದ ನಂತ್ರ ಆಟಗಾರರು ಮೈದಾನಕ್ಕಿಳಿಯಲು ಸೂಕ್ತರಾಗಿದ್ದಾರೆಯೇ ಎಂಬುದನ್ನು ಈ ಪರೀಕ್ಷೆ ಮೂಲಕ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.