ನವದೆಹಲಿ: ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಹೋರಾಟ ಆರಂಭವಾಗಿದ್ದು, ಕ್ವಾರಂಟೈನ್ ಅವಧಿಯನ್ನು ವಿಸ್ತರಿಸುವ ಅನಿವಾರ್ಯತೆ ಎದುರಾಗಿದೆ.
ಇದರಿಂದಾಗಿ ಶುಕ್ರವಾರದಿಂದ ದುಬೈನಲ್ಲಿ ತರಬೇತಿ ಆರಂಭಿಸಲು ಸಜ್ಜಾಗಿದ್ದ ಚೆನ್ನೈ ತಂಡಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ. ಟೀಂ ಇಂಡಿಯಾದ ಮಧ್ಯಮ ವೇಗಿ ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೆಲವು ಸದಸ್ಯರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ದುಬೈಗೆ ಬಂದಿಳಿದ ನಂತರ ಚೆನ್ನೈ ತಂಡದ ಆಟಗಾರರು, ಸಹಾಯಕ ಸಿಬ್ಬಂದಿ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ಆಟಗಾರ, ಸಹಾಯಕ ಸಿಬ್ಬಂದಿ ಹಾಗೂ ಅಧಿಕಾರಿಯೊಬ್ಬರಿಗೆ ಪಾಸಿಟಿವ್ ವರದಿ ಬಂದಿದೆ.
ಇದರಿಂದಾಗಿ ಚೆನ್ನೈ ತಂಡ ಕ್ವಾರಂಟೈನ್ ಅವಧಿಯನ್ನು ಇನ್ನೊಂದು ವಾರ ವಿಸ್ತರಿಸುವ ಒತ್ತಡಕ್ಕೆ ಸಿಲುಕಿದೆ. ಆಗಸ್ಟ್ 21 ರಂದು ದುಬೈ ತಲುಪಿದ್ದ ಚೆನ್ನೈ ತಂಡ 6 ದಿನಗಳ ಕಾಲ ಕಡ್ಡಾಯ ಕ್ವಾರಂಟೈನ್ ಗೆ ಒಳಲಾಗಿದ್ದು, ಈಗ ಮತ್ತೊಂದು ವಾರ ಕ್ವಾರಂಟೈನ್ ನಲ್ಲಿ ಇರಬೇಕಾಗಿದೆ ಎಂದು ಹೇಳಲಾಗಿದೆ.