
ಏಷಿಯನ್ ಚಾಂಪಿಯನ್ಸ್ ಗೇಮ್ಸ್ ಕುಸ್ತಿಯಲ್ಲಿ ಕನ್ನಡಿಗ ನಿಂಗಪ್ಪ ಸಾಧನೆ ಮಾಡಿದ್ದಾರೆ. 45 ಕೆಜಿ ಕುಸ್ತಿ ವಿಭಾಗದಲ್ಲಿ ನಿಂಗಪ್ಪ ಗೆನೆಣ್ಣವರ ಚಿನ್ನದ ಪದಕ ಗಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ನಿಂಗಪ್ಪ ಅವರು ಕಿರ್ಗಿಸ್ತಾನದ ಬಿಸ್ಕೆಕ್ ನಲ್ಲಿ ನಡೆದ ಏಷಿಯನ್ ಚಾಂಪಿಯನ್ ಗೇಮ್ಸ್ ಫೈನಲ್ ಪಂದ್ಯದಲ್ಲಿ ಇರಾನ್ ದೇಶದ ನವಾಜಿ ಅಲಿ ಅವರನ್ನು ಮಣಿಸಿದ್ದಾರೆ. ನಿನ್ನೆ ನಡೆದ ಫೈನಲ್ ನಲ್ಲಿ ನಿಂಗಪ್ಪ ಜಯಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 17 ವರ್ಷದೊಳಗಿನ 45 ಕೆಜಿ ವಿಭಾಗದಲ್ಲಿ ಅವರು ಚಿನ್ನದ ಪದಕ ಗಳಿಸಿದ್ದಾರೆ.
ಭಾರತದ ಫ್ರೀಸ್ಟೈಲ್ ಕುಸ್ತಿಪಟುಗಳು ಕಿರ್ಗಿಸ್ತಾನ್‌ನ ಬಿಷ್ಕೆಕ್‌ನಲ್ಲಿ ನಡೆದ 17 ವರ್ಷದೊಳಗಿನವರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕು ಚಿನ್ನ ಸೇರಿದಂತೆ ಎಂಟು ಪದಕಗಳೊಂದಿಗೆ ತಂಡ ಪ್ರಶಸ್ತಿಯನ್ನು ಗೆದ್ದರು. ನಾಲ್ಕು ಚಿನ್ನ, ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಭಾರತೀಯರು ತಮ್ಮದಾಗಿಸಿಕೊಂಡರು.
ಬುಧವಾರ ನಡೆದ ಫ್ರೀಸ್ಟೈಲ್ ನಲ್ಲಿ ಭಾರತೀಯರು ಮೂರು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.
ಭಾರತೀಯ ಫ್ರೀಸ್ಟೈಲ್ ತಂಡವು 188 ಅಂಕಗಳೊಂದಿಗೆ ಏಷ್ಯನ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಗೆದ್ದುಕೊಂಡರೆ, ಕಝಾಕಿಸ್ತಾನ್ 150 ಅಂಕಗಳೊಂದಿಗೆ ರನ್ನರ್ ಅಪ್ ಸ್ಥಾನ ಗಳಿಸಿತು. ಉಜ್ಬೇಕಿಸ್ತಾನ್ 145 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ.
ಬುಧವಾರ ಭಾರತದ ಪರ ಚಿನ್ನ ಗೆದ್ದವರು ನಿಂಗಪ್ಪ(45 ಕೆಜಿ), ಶುಭಂ(48 ಕೆಜಿ) ಮತ್ತು ವೈಭವ್ ಪಾಟೀಲ್(55 ಕೆಜಿ), ಪ್ರತೀಕ್ ದೇಶಮುಖ್(110 ಕೆಜಿ) ಬೆಳ್ಳಿ ಮತ್ತು ನರಸಿಂಗ್ ಪಾಟೀಲ್(51 ಕೆಜಿ) ಮತ್ತು ಸೌರಭ್ (60 ಕೆಜಿ) ತಲಾ ಕಂಚಿನ ಪದಕ ಪಡೆದರು.