
ಕೊಲ್ಕೊತ್ತಾ: ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಇಂದಿನಿಂದ ಆರಂಭವಾಗಲಿರುವ ಟಿ20 ಸರಣಿ ಮೊದಲ ಪಂದ್ಯ ಜಯಿಸಿ ಶುಭಾರಂಭಕ್ಕೆ ಸಜ್ಜಾಗಿದೆ.
ಕೋಲ್ಕೊತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಇಂದು ಮೂರು ಪಂದ್ಯಗಳ ಟಿ20 ಸರಣಿಗೆ ಚಾಲನೆ ದೊರೆಯಲಿದೆ.
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಟಿ20ಯಲ್ಲಿ 17 ಸಲ ಮುಖಾಮುಖಿಯಾಗಿದ್ದು, 10 ಬಾರಿ ಭಾರತ ತಂಡ ಗೆಲುವು ಕಂಡಿದೆ. 6 ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಜಯಗಳಿಸಿದೆ. ಒಂದು ಪಂದ್ಯದ ಫಲಿತಾಂಶ ಬಂದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಪ್ರೇಕ್ಷಕರಿಲ್ಲದೆ ಟಿ20 ಪಂದ್ಯ ನಡೆಯಲಿದೆ. ಏಕದಿನ ಸರಣಿಯಲ್ಲಿ ಮುಖಭಂಗಕ್ಕೊಳಗಾಗಿದ್ದ ವೆಸ್ಟ್ ಇಂಡೀಸ್ ಟಿ20 ಸರಣಿ ಜಯಿಸುವ ತವಕದಲ್ಲಿದ್ದು, ಗೆಲುವಿಗೆ ಕಾರ್ಯತಂತ್ರ ರೂಪಿಸಿದೆ.
ಆದರೆ, ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ವಿಂಡೀಸ್ ಬಗ್ಗುಬಡಿಯಲು ಯುವಪಡೆಯನ್ನು ಸಜ್ಜುಗೊಳಿಸಿದ್ದಾರೆ. ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ.