ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಟೀಂ ಇಂಡಿಯಾ ಟಿ-20ಗೆ ತಯಾರಿ ನಡೆಸಿದೆ. ಟೆಸ್ಟ್ ಸರಣಿಯನ್ನು 3-1 ಅಂತರದಿಂದ ಗೆದ್ದಿರುವ ಟೀಂ ಇಂಡಿಯಾ ಮುಂದೆ ಈಗ ಟಿ-20 ಪರೀಕ್ಷೆ ನಡೆಯಲಿದೆ. ಮಾರ್ಚ್ 12ರಿಂದ ಅಹಮದಾಬಾದ್ ನಲ್ಲಿ ಟಿ-20 ಸರಣಿ ನಡೆಯಲಿದೆ.
ಟಿ-20 ಸರಣಿ ಗೆಲ್ಲುವುದು ಭಾರತಕ್ಕೆ ಸುಲಭವಲ್ಲ. ಇಂಗ್ಲೆಂಡ್ ನಾಯಕ ಇಯೊನ್ ಮೋರ್ಗಾನ್, ಜೋಸ್ ಬಟ್ಲರ್, ಡೇವಿಡ್ ಮಲನ್ ಮತ್ತು ಬೆನ್ ಸ್ಟೋಕ್ಸ್ ಭಾರತಕ್ಕೆ ಅಪಾಯಕಾರಿ ಎನ್ನಲಾಗ್ತಿದೆ. ಭಾರತ-ಇಂಗ್ಲೆಂಡ್ ಮಧ್ಯೆ ಈವರೆಗೆ 14 ಟಿ-20 ಪಂದ್ಯಗಳು ನಡೆದಿವೆ. ಭಾರತ ಹಾಗೂ ಇಂಗ್ಲೆಂಡ್ ಸಮಬಲ ಸಾಧಿಸಿದೆ. ಎರಡೂ ತಂಡಗಳು 7-7 ಗೆಲುವು ಸಾಧಿಸಿವೆ. ಇತ್ತೀಚಿನ ಐದು ಪಂದ್ಯಗಳ ಫಲಿತಾಂಶ ನೋಡುವುದಾದ್ರೆ ಭಾರತ ಮೇಲುಗೈ ಸಾಧಿಸಿದೆ. ಐದು ಟಿ-20 ಪಂದ್ಯಗಳಲ್ಲಿ ಭಾರತ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಕೊನೆಯದಾಗಿ ಭಾರತ 2018ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ-20 ಪಂದ್ಯವನ್ನು ಆಡಿತ್ತು. ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-1 ಅಂತರದ ಗೆಲುವು ಸಾಧಿಸಿತ್ತು. ಕೊನೆ ಪಂದ್ಯದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಶತಕ ಬಾರಿಸಿದ್ದರು. ಈ ಬಾರಿ ಟೀಂ ಇಂಡಿಯಾ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಿದೆ. ಇಂಗ್ಲೆಂಡ್ ವಿರುದ್ಧ ಐದು ಟಿ-20 ಪಂದ್ಯಗಳು ನಡೆಯಲಿದ್ದು,ಎಲ್ಲ ಪಂದ್ಯಗಳು ಅಹಮದಾಬಾದ್ ನಲ್ಲಿ ನಡೆಯಲಿದೆ.