ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಭಾರತ ಮತ್ತು ಆಫ್ಘಾನಿಸ್ತಾನ ನಡುವಿನ ಪಂದ್ಯ ಟಿ20 ಕ್ರಿಕೆಟ್ ಇತಿಹಾಸದಲ್ಲಿಯೇ ಅಪರೂಪದಲ್ಲೇ ಅಪರೂಪ ಎನ್ನುವಂತೆ ಎರಡನೇ ಬಾರಿ ಸೂಪರ್ ಓವರ್ ಗೆ ಸಾಕ್ಷಿಯಾಗಿದ್ದು, ಭಾರತ ಗೆಲುವು ಸಾಧಿಸಿದೆ.
ಎರಡನೇ ಸೂಪರ್ ಓವರ್ ನಲ್ಲಿ ಭಾರತ ನೀಡಿದ 12 ರನ್ ಗಳಿಗೆ ಪ್ರತಿಯಾಗಿ ಆಫ್ಘಾನಿಸ್ತಾನ ತಂಡವನ್ನು ಒಂದು ರನ್ ಗೆ ಎರಡು ವಿಕೆಟ್ ಕಬಳಿಸಿದ ಭಾರತ 10 ರನ್ ಅಂತರದಲ್ಲಿ ಜಯಗಳಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಇದಕ್ಕಿಂತ ಮೊದಲು ಸೂಪರ್ ಓವರ್ ನಲ್ಲಿ ಆಫ್ಘಾನಿಸ್ತಾನ ಒಡ್ಡಿದ 17 ರನ್ ಗುರಿಗೆ ಪ್ರತಿಯಾಗಿ ಭಾರತ ಒಂದು ವಿಕೆಟ್ ಗೆ 16 ರನ್ ಗಳಿಸಿದ ಕಾರಣ ಪಂದ್ಯ ಮತ್ತೆ ಟೈ ಆಯಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿದ್ದು, ರೋಹಿತ್ ಶರ್ಮಾ ಅಜೇಯ 121, ರಿಂಕು ಸಿಂಗ್ ಅಜೇಯ 69 ರನ್ ಗಳಿಸಿದರು. ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 6 ವಿಕೆಟ್ ಗೆ 212 ರನ್ ಗಳಿಸಿತು. ಹೀಗಾಗಿ ಸೂಪರ್ ಓವರ್ ನಡೆಸಲಾಯಿತು.
ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ ಮುರಿಯದ ಐದನೇ ವಿಕೆಟ್ ಗೆ 95 ಎಸೆತಗಳಲ್ಲಿ 190 ರನ್ ಗಳಿಸುವ ಮೂಲಕ ಭಾರತದ ಪರ ಯಾವುದೇ ವಿಕೆಟ್ ಅತ್ಯಧಿಕ ರನ್ ದಾಖಲಿಸಿದರು. 2022 ರಲ್ಲಿ ಸ್ಯಾಮ್ಸನ್ ಮತ್ತು ದೀಪಕ್ ಹೂಡ ಭಾರತದ ಪರ ಎರಡನೇ ವಿಕೆಟ್ ಗೆ 176 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ಇನ್ನು ಟಿ 20 ಕ್ರಿಕೆಟ್ ಇತಿಹಾಸದಲ್ಲಿ ಐದು ಶತಕ ಗಳಿಸಿದ ವಿಶ್ವದ ಮೊದಲ ಆಟಗಾರ ಎನ್ನುವ ಕೀರ್ತಿಗೆ ರೋಹಿತ್ ಶರ್ಮಾ ಭಾಜನರಾದರು. ಅವರು ಪಂದ್ಯದಲ್ಲಿ ಅಜೇಯ 121 ರನ್ ಗಳಿಸಿದರು.
ಐದನೇ ಶತಕದೊಂದಿಗೆ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ಶತಕದ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸೂರ್ಯಕುಮಾರ್ ಯಾದವ್ 4, ಆಸ್ಟ್ರೇಲಿಯಾದ ಮ್ಯಾಕ್ಸ್ವೆಲ್ 4 ಶತಕ ಗಳಿಸಿದ್ದಾರೆ.