ಕೊಲಂಬೊ: ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಸೂಪರ್ -4 ಹಂತ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಲೀಗ್ ಹಂತದಲ್ಲಿ ನಡೆದ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಪಲ್ಲೇಕೆಲೆಯಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ ಗಳಲ್ಲಿ 266 ರನ್ ಗಳಿಸಿತ್ತು. ಮಳೆಯಿಂದಾಗಿ ಪಾಕಿಸ್ತಾನ ಬ್ಯಾಟಿಂಗ್ ಮಾಡಲು ಸಾಧ್ಯವಾಗದೆ ಪಂದ್ಯ ರದ್ದು ಮಾಡಲಾಗಿತ್ತು.
ಇಂದು ಸೂಪರ್ -4 ಹಂತದ ಪಂದ್ಯ ನಡೆಯಲಿದ್ದು, ಭಾನುವಾರದ ಪಂದ್ಯ ಮಳೆಯಿಂದಾಗಿ ರದ್ದುಗೊಂಡರೆ ಸೋಮವಾರ ಪಂದ್ಯ ನಡೆಯಲಿದೆ. ಇದಕ್ಕಾಗಿ ಮೀಸಲು ದಿನ ಕಾಯ್ದಿರಸಲಾಗಿದೆ.
ಭಾರತ ಮತ್ತು ಪಾಕಿಸ್ತಾನ ಏಕದಿನ ಕ್ರಿಕೆಟ್ ನಲ್ಲಿ ಇದುವರೆಗೆ 133 ಬಾರಿ ಮುಖಾಮುಖಿಯಾಗಿದ್ದು, ವಿಶ್ವಕಪ್ ಕ್ರಿಕೆಟ್ ನಲ್ಲಿ 7 ಬಾರಿ, ಏಷ್ಯಾ ಕಪ್ ನಲ್ಲಿ 14 ಸಲ ಮುಖಾಮುಖಿಯಾಗಿವೆ.
ಏಷ್ಯಾಕಪ್ ನಲ್ಲಿ ಭಾರತ 7 ಬಾರಿ ಚಾಂಪಿಯನ್ ಆಗಿದೆ. ಪಾಕಿಸ್ತಾನ ಎರಡು ಬಾರಿ ಪ್ರಶಸ್ತಿ ಗಳಿಸಿದೆ. ಒಟ್ಟು 133 ಏಕದಿನ ಪಂದ್ಯಗಳಲ್ಲಿ ಭಾರತ, ಪಾಕಿಸ್ತಾನ ಮುಖಮುಖಿಯಾಗಿದ್ದು, ಭಾರತ 55 ಸಲ, ಪಾಕಿಸ್ತಾನ 73 ಬಾರಿ ಜಯಗಳಿಸಿದೆ. 5 ಪಂದ್ಯಗಳು ಡ್ರಾ ಆಗಿವೆ. ವಿಶ್ವಕಪ್ ನಲ್ಲಿ 7 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 7 ಪಂದ್ಯಗಳನ್ನು ಜಯಿಸಿದೆ. ಏಷ್ಯಾ ಕಪ್ ನಲ್ಲಿ 14 ಸಲ ಮುಖಾಮುಖಿಯಾಗಿದ್ದು, ಭಾರತ 7 ಪಾಕಿಸ್ತಾನ 5 ಪಂದ್ಯಗಳಲ್ಲಿ ಜಯಸಿವೆ. ಎರಡು ಪಂದ್ಯಗಳು ಡ್ರಾ ಆಗಿದೆ.
ಇಂದಿನ ಪಂದ್ಯ ಗೆಲ್ಲುವ ಗುರಿಯೊಂದಿಗೆ ಭಾರತ ತಂಡ ಕೆಲವು ಬದಲಾವಣೆಗಳೊಂದಿಗೆ ಅಖಾಡಕ್ಕಿಳಿಯಲು ಸಜ್ಜಾಗಿದ್ದು, ಗೆಲುವಿಗೆ ಕಾರ್ಯತಂತ್ರ ರೂಪಿಸಿದೆ. ಕೆ.ಎಲ್. ರಾಹುಲ್ ತಂಡಕ್ಕೆ ಮರಳಲಿದ್ದು, ಶ್ರೇಯಸ್ ಅಯ್ಯರ್ ಅಥವಾ ಇಶಾನ್ ಕಿಶಾನ್ ಹೊರಗೊಳಿಯಬಹುದು ಎಂದು ಹೇಳಲಾಗಿದೆ.