ತಿರುವನಂತಪುರಂ: ನನ್ನ ಮಾತು ಕೇಳಲು ಅಚ್ಚರಿಯೆನಿಸಿದರೂ ನನಗೆ ನಂಬಿಕೆ ಇದೆ 2023 ರ ವಿಶ್ವಕಪ್ ನಲ್ಲಿ ಆಡುತ್ತೇನೆ ಎಂದು ಕ್ರಿಕೆಟಿಗ ಶ್ರೀಶಾಂತ್ ಹೇಳಿದ್ದಾರೆ.
2023ರ ವಿಶ್ವಕಪ್ ನಲ್ಲಿ ಆಡುವುದೇ ನನ್ನ ಮುಂದಿರುವ ಬಹುದೊಡ್ಡ ಗುರಿಯಾಗಿದೆ. ನಮ್ಮ ಗುರಿ ಎಂದಿಗೂ ಉನ್ನತ ಮಟ್ಟದಲ್ಲಿ ಇರಬೇಕು. ನನ್ನ ಗಮನವು ಎತ್ತರದಲ್ಲಿರುತ್ತದೆ ಎಂದು ಹೇಳಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ನಿಷೇಧಕ್ಕೊಳಗಾಗಿದ್ದ ಶ್ರೀಶಾಂತ್ ಅವರ 7 ವರ್ಷದ ನಿಷೇಧದ ಅವಧಿ ಸೆಪ್ಟಂಬರ್ ಗೆ ಅಂತ್ಯವಾಗಲಿದೆ. ನಂತರ ಕೇರಳ ರಣಜಿ ತಂಡವನ್ನು ಸೇರಿಕೊಳ್ಳಲು ಅವರು ತಯಾರಿ ನಡೆಸಿದ್ದಾರೆ. ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದರೆ ಶ್ರೀಶಾಂತ್ ರಣಜಿ ತಂಡ ಸೇರುವುದು ಖಚಿತವಾಗಿದೆ. ಸ್ಥಿರ ಪ್ರದರ್ಶನ ನೀಡಿದಲ್ಲಿ ಟೀಮ್ ಇಂಡಿಯಾ ಪರವಾಗಿ ಕಣಕ್ಕಿಳಿಯುವ ಅವಕಾಶ ಸಿಗಲಿದೆ. 27 ಟೆಸ್ಟ್, 53 ಏಕದಿನ, 10 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ಶ್ರೀಶಾಂತ್ ಕ್ರಮವಾಗಿ 87, 75, 7 ವಿಕೆಟ್ ಪಡೆದಿದ್ದಾರೆ.