ಲಂಡನ್: ಮೂರು ಪಂದ್ಯಗಳ ಟಿ20 ಸರಣಿಯನ್ನು 2 -1 ಅಂತರದಿಂದ ಗೆದ್ದು ಆತ್ಮವಿಶ್ವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ಸರಣಿಗೆ ಸಜ್ಜಾಗಿದೆ. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಲಂಡನ್ ನಕೆನಿಂಗ್ಟನ್ ಓವಲ್ ಮೈದಾನದಲ್ಲಿ ಸಂಜೆ 5.30ಕ್ಕೆ ಪಂದ್ಯ ಆರಂಭವಾಗಲಿದೆ.
ಭಾರತ ಈ ವರ್ಷ ಆಡಿದ 2 ಏಕದಿನ ಸರಣಿಗಳಲ್ಲಿ ಮಿಶ್ರಫಲ ಕಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ 3 -0 ಅಂತರದಿಂದ ಸೋಲು ಕಂಡಿದ್ದ ಭಾರತ, ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಇಂಗ್ಲೆಂಡ್ ಇತ್ತೀಚೆಗೆ ನೆದರ್ಲ್ಯಾಂಡ್ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಇಂದಿನ ಪಂದ್ಯವನ್ನು ಗೆಲ್ಲುವುದರೊಂದಿಗೆ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಲು ಉಭಯ ತಂಡಗಳು ಕಾರ್ಯತಂತ್ರ ರೂಪಿಸಿವೆ. ಫಾರ್ಮ್ ಕಳೆದುಕೊಂಡಿರುವ ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಅಬ್ಬರಿಸುವ ಸಾಧ್ಯತೆ ಇದೆ. ಆದರೆ, ತೊಡೆ ನೋವಿನಿಂದ ಬಳಲುತ್ತಿರುವ ಅವರು ಆಡುವುದು ಅನುಮಾನವೆನ್ನಲಾಗಿದೆ. ಮೊದಲ ಏಕದಿನ ಪಂದ್ಯದಿಂದ ಕೊಹ್ಲಿ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿದೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಶಿಖರ್ ಧವನ್ ಜೊತೆಗೆ ಇನಿಂಗ್ಸ್ ಆರಂಭಿಸಬಹುದಾಗಿದೆ. 1974 ರಿಂದ 2021 ರವರೆಗೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು 103 ಬಾರಿ ಮುಖಾಮುಖಿಯಾಗಿದ್ದು, ಭಾರತ 55 ಬಾರಿ, ಇಂಗ್ಲೆಂಡ್ 43 ಬಾರಿ ಜಯಗಳಿಸಿವೆ. ಎರಡು ಪಂದ್ಯಗಳು ಟೈ ಆಗಿದ್ದು, ಮೂರು ಪಂದ್ಯಗಳ ಫಲಿತಾಂಶ ಬಂದಿಲ್ಲ.