
ಮುಂಬೈ/ದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್ ಮಾಡಿದ ಆರೋಪದ ಮೇಲೆ ಮುಂಬೈನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ರೋಷನ್ ಗುರುಬಕ್ಷನಿ ತಲಾ 1,20,000 ರೂ.ಗೆ ಟಿಕೆಟ್‌ಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆತನಿಂದ ಎರಡು ಟಿಕೆಟ್ ವಶಪಡಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ರೋಷನ್ ಗುರುಬಕ್ಷನಿ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಟಿಕೆಟ್‌ಗಳ ಬ್ಲಾಕ್ ಮಾರ್ಕೆಟಿಂಗ್ ನಲ್ಲಿ ಭಾಗಿಯಾಗಿರುವ ಎರಡನೇ ಆರೋಪಿಯನ್ನು ಪತ್ತೆಹಚ್ಚಲು ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ ಪ್ರವೀಣ್ ಮುಂಢೆ ಅವರು ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್ ಪಂದ್ಯದ ಟಿಕೆಟ್‌ಗಳನ್ನು ಖರೀದಿಸುವಾಗ ಎಚ್ಚರಿಕೆ ವಹಿಸುವಂತೆ ಕೇಳಿಕೊಂಡಿದ್ದಾರೆ. ಭದ್ರತಾ ಪ್ರೋಟೋಕಾಲ್‌ಗಳ ಕಾರಣದಿಂದ ಬುಧವಾರ ಬೇಗನೆ ಕ್ರೀಡಾಂಗಣಕ್ಕೆ ತಲುಪುವಂತೆ ಕೇಳಿಕೊಂಡರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಾಳೆ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.
ಟೀಮ್ ಇಂಡಿಯಾ ತನ್ನ ಎಲ್ಲಾ ಒಂಬತ್ತು ಲೀಗ್ ಪಂದ್ಯಗಳಲ್ಲಿ ಜಯಗಳಿಸಿ ದಾಖಲೆಯೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ನ್ಯೂಜಿಲೆಂಡ್ ತನ್ನ 9 ಪಂದ್ಯಗಳಲ್ಲಿ ಐದರಲ್ಲಿ ಜಯಗಳಿಸುವ ಮೂಲಕ ಕೊನೆಯ ನಾಲ್ಕರಲ್ಲಿ ಸ್ಥಾನವನ್ನು ಪಡೆದುಕೊಂಡಿತು.