ಬ್ಯಾಂಕಾಕ್ ನಲ್ಲಿ ನಡೆದ ಫೈನಲ್ ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ವಿರುದ್ಧ 3-0 ಅಂತರದಿಂದ ಭರ್ಜರಿ ಜಯಗಳಿಸುವ ಮೂಲಕ ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ ಮೊದಲ ಬಾರಿಗೆ ಥಾಮಸ್ ಕಪ್ ಪ್ರಶಸ್ತಿ ಎತ್ತಿಹಿಡಿಯುವ ಮೂಲಕ ಇತಿಹಾಸ ನಿರ್ಮಿಸಿದೆ.
ವಿಶ್ವ ಚಾಂಪಿಯನ್‌ಶಿಪ್‌ನ ಪದಕ ವಿಜೇತ ಲಕ್ಷ್ಯ ಸೇನ್, ಕಿಡಂಬಿ ಶ್ರೀಕಾಂತ್ ಮತ್ತು ವಿಶ್ವದ 8 ನೇ ಶ್ರೇಯಾಂಕದ ಡಬಲ್ಸ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಸ್ಮರಣೀಯ ಪ್ರದರ್ಶನಗಳನ್ನು ನೀಡುವ ಮೂಲಕ ಭಾರತವು ಉತ್ತಮ ಪ್ರದರ್ಶನ ನೀಡಿದೆ.
ನಾಕೌಟ್ ಹಂತ ನಂತರ, ಸೇನ್ ಅವರು ಭಾರತಕ್ಕೆ 1-0 ಮುನ್ನಡೆಯನ್ನು ತಂದುಕೊಟ್ಟರು, ವಿಶ್ವದ ಐದನೇ ಶ್ರೇಯಾಂಕದ ಆಂಥೋನಿ ಸಿನಿಸುಕಾ ಗಿಂಟಿಂಗ್ ವಿರುದ್ಧ 8-21, 21-17, 21-16 ಅಂತರದಲ್ಲಿ ಜಯಗಳಿಸಿದರು.
ದೇಶದ ಅತ್ಯುತ್ತಮ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಎರಡನೇ ಗೇಮ್ ನಲ್ಲಿ ನಾಲ್ಕು ಮ್ಯಾಚ್ ಪಾಯಿಂಟ್ ಗಳನ್ನು ಉಳಿಸುವ ಮೂಲಕ ಭರ್ಜರಿ ಪ್ರದರ್ಶನ ನೀಡಿದರು. ಅಂತಿಮವಾಗಿ ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಅವರನ್ನು 18-21, 23-21, 21-19 ರಿಂದ ಸೋಲಿಸಿದರು.
ಎರಡನೇ ಸಿಂಗಲ್ಸ್ ನಲ್ಲಿ ಶ್ರೀಕಾಂತ್ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಜೊನಾಥನ್ ಕ್ರಿಸ್ಟಿ ಅವರನ್ನು 48 ನಿಮಿಷಗಳಲ್ಲಿ 21-15, 23-21 ರಿಂದ ಸೋಲಿಸಿ ಸ್ಪರ್ಧೆಯನ್ನು ಪೂರ್ಣಗೊಳಿಸಿದರು.