ಅಬುಧಾಬಿ: ಟಿ20 ವಿಶ್ವಕಪ್ ನಲ್ಲಿ ಸತತ ಎರಡು ಪಂದ್ಯಗಳನ್ನು ಸೋತು ಸೆಮಿಫೈನಲ್ ಹಾದಿಯನ್ನು ಕಠಿಣ ಮಾಡಿಕೊಂಡಿರುವ ಭಾರತ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಪರಾಭವಗೊಂಡಿರುವ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಆಫ್ಘಾನಿಸ್ತಾನ ವಿರುದ್ಧ ಜಯಗಳಿಸಿದಲ್ಲಿ ಮಾತ್ರ ಮುಂದಿನ ಹಂತಕ್ಕೆ ಹೋಗುವ ಅವಕಾಶ ಸಿಗಲಿದೆ. ಇಲ್ಲದಿದ್ದರೆ ಉಳಿದ ಪಂದ್ಯಗಳನ್ನು ಆಡಿ ಮರಳಬೇಕಿದೆ. ಸೆಮಿಫೈನಲ್ ಹಾದಿ ಕಠಿಣ ಮಾಡಿಕೊಂಡಿರುವ ಕೊಹ್ಲಿ ಬಳಗ ಆಫ್ಘಾನಿಸ್ತಾನದ ವಿರುದ್ಧ ಗೆಲುವು ಸಾಧಿಸಲು ಎಲ್ಲ ರೀತಿಯ ಕಾರ್ಯತಂತ್ರ ರೂಪಿಸಿದೆ. ನಮೀಬಿಯಾ ಮತ್ತು ಸ್ಕಾಟ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ್ದ ಅಫ್ಘಾನಿಸ್ತಾನ ತಂಡ ಪಾಕಿಸ್ತಾನದ ವಿರುದ್ಧ ಪ್ರಬಲ ಹೋರಾಟವನ್ನು ನಡೆಸಿದ್ದು ಭಾರತ ತಂಡದ ವಿರುದ್ಧವೂ ಗೆಲ್ಲುವ ವಿಶ್ವಾಸದಲ್ಲಿದೆ.
ಭಾರತ ವಿಶ್ವಕಪ್ ನಲ್ಲಿ ಆಡಿದ ಎರಡೂ ಪಂದ್ಯಗಳನ್ನು ಸೋಲು ಕಂಡಿದೆ. ಅಫ್ಘಾನಿಸ್ತಾನ ಆಡಿದ 3 ಪಂದ್ಯಗಳಲ್ಲಿ ಎರಡು ಜಯ, ಪಾಕಿಸ್ತಾನದ ವಿರುದ್ಧ ಪರಾಭವಗೊಂಡಿದೆ. 4 ಅಂಕ ಗಳಿಸಿದ ಆಫ್ಘಾನಿಸ್ತಾನ ಯಾವುದೇ ಅಂಕಗಳಿಸದ ಭಾರತ ತಂಡವನ್ನು ಎದುರಿಸಲಿದೆ. ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಇಂದು ರಾತ್ರಿ 7.30 ಕ್ಕೆ ಪಂದ್ಯ ಆರಂಭವಾಗಲಿದೆ.
ಈ ಹಿಂದೆ ನಡೆದ 2010, 2012ರ ಟಿ20 ವಿಶ್ವಕಪ್ ನಲ್ಲಿ ಆಫ್ಘಾನಿಸ್ತಾನ ವಿರುದ್ಧ ಭಾರತ ತಂಡ ಜಯಗಳಿಸಿತ್ತು. ಇಂದಿನ ಪಂದ್ಯವನ್ನು ಕೂಡ ಗೆಲ್ಲುವ ವಿಶ್ವಾಸದಲ್ಲಿದೆ.