ಸೆಂಚುರಿಯನ್: ವಿರಾಟ್ ಕೊಹ್ಲಿ ಭಾನುವಾರ ದಕ್ಷಿಣ ಆಫ್ರಿಕಾದಲ್ಲಿ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೊದಲ ಟೆಸ್ಟ್(ಬಾಕ್ಸಿಂಗ್ ಡೇ ಟೆಸ್ಟ್) ಡಿಸೆಂಬರ್ 26) ಸೆಂಚುರಿಯನ್‌ನಲ್ಲಿ ಪ್ರಾರಂಭವಾಗಲಿದೆ.
ಲಂಡನ್ ಪ್ರವಾಸದ ನಂತರ ಕೊಹ್ಲಿ ತಂಡವನ್ನು ಸೇರಿಕೊಂಡರು. ಕೌಟುಂಬಿಕ ತುರ್ತುಪರಿಸ್ಥಿತಿಯಿಂದಾಗಿ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ ಎಂಬ ವರದಿಗಳ ನಂತರ ಈ ಬೆಳವಣಿಗೆ ನಡೆದಿದೆ. ಆ ವರದಿಗಳಿಗೆ ವ್ಯತಿರಿಕ್ತವಾಗಿ ಕೊಹ್ಲಿ ಹಾಜರಾಗುತ್ತಿರುವುದು ತುರ್ತು ಪರಿಸ್ಥಿತಿ ಕಾರಣಕ್ಕಲ್ಲ, ಬದಲಿಗೆ ಪೂರ್ವ ಯೋಜಿತ ಪ್ರವಾಸವಾಗಿದೆ. ಅದರ ಬಗ್ಗೆ ಅವರು ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮತ್ತು ತಂಡದ ಮ್ಯಾನೇಜ್‌ಮೆಂಟ್‌ಗೆ ತಿಳಿಸಿದ್ದರು ಎನ್ನಲಾಗಿದೆ.
ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ, ನಂತರ ಲಂಡನ್‌ಗೆ ಮತ್ತು ಸೆಂಚುರಿಯನ್‌ಗೆ ಕೊಹ್ಲಿ ಪ್ರಯಾಣ ಬೆಳೆಸಿದ್ದಾರೆ. ಕೊಹ್ಲಿ ಡಿಸೆಂಬರ್ 15 ರಂದು ಭಾರತದಿಂದ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. ಸುಮಾರು ಮೂರರಿಂದ ನಾಲ್ಕು ದಿನಗಳ ತರಬೇತಿಯ ನಂತರ ಡಿಸೆಂಬರ್ 19 ರಂದು ಲಂಡನ್‌ಗೆ ಪ್ರಯಾಣಿಸಿದರು. ಅವರು ಡಿಸೆಂಬರ್ 24 ರ ಬೆಳಿಗ್ಗೆ ದಕ್ಷಿಣ ಆಫ್ರಿಕಾಕ್ಕೆ ಹಿಂದಿರುಗುವ ಮೊದಲು ಮುಂದಿನ ಕೆಲವು ದಿನಗಳ ಕಾಲ ಅಲ್ಲಿಯೇ ಇದ್ದರು. .ತಂಡಕ್ಕೆ ಮರಳಿದ ನಂತರ, ವಿರಾಟ್ ತಂಡದೊಂದಿಗೆ ಅಭ್ಯಾಸ ಮಾಡಿದ್ದಾರೆ.