
ಪಿ.ವಿ. ಸಿಂಧು ಉದಯದ ಬಳಿಕ ಏಕೋ ನೇಪಥ್ಯಕ್ಕೆ ಸರಿದಂತೆ ಕಾಣುತ್ತಿರುವ ಬ್ಯಾಡ್ಮಿಂಟನ್ ಸೆನ್ಸೇಶನ್ ಸೈನಾ ನೆಹ್ವಾಲ್ 2020ರ ಒಲಿಂಪಿಕ್ಸ್‌ನಲ್ಲಿ ಆಡುವರೇ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಲಂಡನ್ ಒಲಿಂಪಿಕ್ ಪದಕ ವಿಜೇತೆ, “ಒಲಿಂಪಿಕ್ಸ್‌ನಲ್ಲಿ ಆಡಬೇಕು ಎಂದು ಪ್ರತಿಯೊಬ್ಬರ ತಲೆಯಲ್ಲೂ ಇರುತ್ತದೆ ಎಂದು ನನಗೆ ಗೊತ್ತಿದೆ. ಇದು ಬಹಳ ದೊಡ್ಡ ವಿಷಯ. ಆದರೆ ಇದಕ್ಕೂ ಮುನ್ನ ನೀವು ಬಹಳಷ್ಟು ಟೂರ್ನಮೆಂಟ್‌ಗಳ ಬಗ್ಗೆ ಚಿಂತಿಸಬೇಕು. ಅಗ್ರ 20 ರ‍್ಯಾಂಕಿಂಗ್‌ನಲ್ಲಿರುವ ಆಟಗಾರ್ತಿಯರ ವಿರುದ್ಧ ಗೆಲ್ಲಲು ನಾನು ನನ್ನ ರಿದಮ್ ಅನ್ನು ಮರಳಿ ಪಡೆಯಬೇಕಿದೆ” ಎಂದು ಹೇಳಿದ್ದಾರೆ.
ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್‌ನ ಟೋಕಿಯೋ ಒಲಿಂಪಿಕ್ಸ್ ಅರ್ಹತಾ ರ‍್ಯಾಂಕಿಂಗ್‌ನಲ್ಲಿ 22ನೇ ಸ್ಥಾನದಲ್ಲಿರುವ ಸೈನಾ ನೆಹ್ವಾಲ್ ಈ ಬಗ್ಗೆ ಇನ್ನಷ್ಟು ಮಾತನಾಡಿ, “ಜೋಕೋವಿಚ್, ಫೆಡರರ್, ನಡಾಲ್, ಸೆರೆನಾರಂಥ ಶ್ರೇಷ್ಠರ ನಿದರ್ಶನಗಳನ್ನು ನಾನು ನೋಡಲು ಇಚ್ಛಿಸುತ್ತೇನೆ. ನಾನೊಬ್ಬ ಹೋರಾಟಗಾತಿಯಾಗಿದ್ದು ಅಂಗಳಕ್ಕೆ ಮರಳಿ ಬರುವೆ’’ ಎಂದು ನೆಹ್ವಾಲ್ ತಿಳಿಸಿದ್ದಾರೆ.