ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಕುಸ್ತಿಪಟುಗಳು ಇಂದು ಶಾಸ್ತ್ರಿ ಭವನದಲ್ಲಿ ಕ್ರೀಡಾ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಸುದ್ದಿಗೋಷ್ಠಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ, ಕುಸ್ತಿಪಟು ವಿನೇಶ್ ಫೋಗಟ್ ಅವರು, ಸರ್ಕಾರದಿಂದ ಯಾವುದೇ ತೃಪ್ತಿಕರ ಪ್ರತಿಕ್ರಿಯೆ ಬಂದಿಲ್ಲ ಇಂದು ಪ್ರತಿಭಟನೆಯ 2 ನೇ ದಿನವಾಗಿದೆ. ಸರ್ಕಾರದಿಂದ ನಮಗೆ ಯಾವುದೇ ತೃಪ್ತಿಕರ ಪ್ರತಿಕ್ರಿಯೆ ಸಿಕ್ಕಿಲ್ಲ. ಬ್ರಿಜ್ ಭೂಷಣ್ ಸಿಂಗ್ ರಾಜೀನಾಮೆ ನೀಡಬೇಕು. ನಾವು ಪ್ರಕರಣವನ್ನು ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರದ ಯಾವ ಪ್ರತಿನಿಧಿ ಏನು ಹೇಳಿದರು ಎಂದು ನಾವು ಈಗ ಹೇಳಲು ಬಯಸುವುದಿಲ್ಲ. ನಮ್ಮ ಹೋರಾಟ ಸರ್ಕಾರ ಅಥವಾ ಸರ್ಕಾರದ ಜನರೊಂದಿಗೆ ಅಲ್ಲ, ನಮ್ಮ ಹೋರಾಟ ಒಬ್ಬರೊಂದಿಗೆ ಮಾತ್ರ. ಬಾಗಿಲು ಮುಚ್ಚಿ ಶೋಷಣೆ ಮಾಡಲಾಗಿದೆ, ಅಲ್ಲಿ ಕ್ಯಾಮೆರಾ ಇಲ್ಲ, ಬಲಿಪಶುವಿನ ಗುರುತು ಬಹಿರಂಗಪಡಿಸಲು ಒತ್ತಾಯಿಸಬಾರದು, ಶೋಷಣೆಯಿಂದ ಅನೇಕ ಮಹಿಳಾ ಕುಸ್ತಿಪಟುಗಳ ವೃತ್ತಿಜೀವನ ಹಾಳುಮಾಡಲಾಗಿದೆ. WFI ಅಧ್ಯಕ್ಷರನ್ನು ನನ್ನ ವಿರುದ್ಧ ಮುಖಾಮುಖಿ ಮಾಡಿ, WFI ಮುಖ್ಯಸ್ಥರನ್ನು ಜೈಲಿಗೆ ಹಾಕಬೇಕು, ನಾವು ಕೇವಲ ಕುಸ್ತಿಪಟುಗಳಲ್ಲ, ಬಲಿಪಶುಗಳ ಹೆಸರನ್ನು ಬಹಿರಂಗಪಡಿಸಲು ನಮ್ಮನ್ನು ಒತ್ತಾಯಿಸಬೇಡಿ ಎಂದು ಹೇಳಿದ್ದಾರೆ.
ಈ ರೀತಿ ದೌರ್ಜನ್ಯವನ್ನು ಎದುರಿಸಿದ ಸುಮಾರು 5 ರಿಂದ 6 ಮಹಿಳಾ ಕುಸ್ತಿಪಟುಗಳು ಇದ್ದಾರೆ ಎಂದು ಬಜರಂಗ್ ಪುನಿಯಾ ಹೇಳಿದ್ದು, ಅದನ್ನು ಸಾಬೀತುಪಡಿಸಲು ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದು ತಿಳಿಸಿದ್ದಾರೆ.