ಕೋಲ್ಕತ್ತಾ: 2018 ರಲ್ಲಿ ತನ್ನ ಪತಿಯೊಂದಿಗೆ ಜಗಳಕ್ಕಾಗಿ ಸುದ್ದಿಯಲ್ಲಿದ್ದ ಭಾರತೀಯ ಕ್ರಿಕೆಟಿಗ ಮತ್ತು ವೇಗದ ಬೌಲರ್ ಮೊಹಮ್ಮದ್ ಶಮಿಯ ವಿಚ್ಛೇದಿತ ಪತ್ನಿ ಹಸಿನ್ ಜಹಾನ್ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.
ಶುಕ್ರವಾರ, ಅವರು ಬಿಹಾರದಿಂದ ಕೋಲ್ಕತ್ತಾಗೆ ಪ್ರಯಾಣಿಸುತ್ತಿದ್ದಾಗ ಗುರುವಾರ ರಾತ್ರಿ ರೈಲ್ವೇ ಟಿಕೆಟ್ ಚೆಕ್ ಮಾಡುವ ಸಿಬ್ಬಂದಿ ದುರ್ವರ್ತನೆ ತೋರಿದ್ದಾಗಿ ಆರೋಪಿಸಿದ್ದಾರೆ.
ಈ ವಿಚಾರದಲ್ಲಿ ಪೊಲೀಸರಿಗೆ ದೂರು ನೀಡಿದ ಬಳಿಕ ಭದ್ರತಾ ಸಿಬ್ಬಂದಿಯ ಬೆಂಗಾವಲು ಪಡೆದು ಕೋಲ್ಕತ್ತಾಗೆ ಮರಳಿರುವುದಾಗಿ ಜಹಾನ್ ಹೇಳಿಕೊಂಡಿದ್ದಾರೆ. ಪೂರ್ವ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಏಕಲಬ್ಯ ಚಕ್ರವರ್ತಿ, ರೈಲ್ವೇಯಲ್ಲಿ ಇದುವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ. ಆದರೂ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಜಹಾನ್ ಪ್ರಕಾರ, ಅವರು ತನ್ನ ಸಂಬಂಧಿಕರೊಬ್ಬರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಬಿಹಾರದಿಂದ ಕೋಲ್ಕತ್ತಾಗೆ ಹಿಂತಿರುಗುತ್ತಿದ್ದರು. ಆಕೆಗೆ ಕೋಲ್ಕತ್ತಾ ಜೋಗ್ಬಾನಿ ಎಕ್ಸ್ ಪ್ರೆಸ್ನಲ್ಲಿ ಮೇಲಿನ ಬರ್ತ್ ನೀಡಲಾಯಿತು. ಆದಾಗ್ಯೂ, ಅಲ್ಲಿ ಕೆಳ ಬರ್ತ್ ಖಾಲಿಯಿತ್ತು. ಸಹ ಪ್ರಯಾಣಿಕರ ಕೋರಿಕೆಯ ಮೇರೆಗೆ ನಾನು ಕೆಳ ಬರ್ತ್ಗೆ ಸ್ಥಳಾಂತರಗೊಂಡೆ. ಆದರೆ, ಗುರುವಾರ ತಡರಾತ್ರಿ ಟಿಕೆಟ್ ತಪಾಸಣೆ ಸಿಬ್ಬಂದಿ ಅಲ್ಲಿಗೆ ಆಗಮಿಸಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನ್ನ ಮೊಬೈಲ್ ಅನ್ನು ಕೆಳಗೆ ಎಸೆದರು, ನಂತರ ನಾನು ಪೊಲೀಸರ ಸಹಾಯವನ್ನು ಪಡೆದುಕೊಂಡು ಭದ್ರತಾ ಬೆಂಗಾವಲುಗಳೊಂದಿಗೆ ನಗರಕ್ಕೆ ಮರಳಿದೆ ಎಂದು ಹೇಳಿದ್ದಾರೆ.