ಅವರಿಗೆ ಹುಟ್ಟಿನಿಂದ ಕಾಲುಗಳೇ ಇಲ್ಲ. ಆದರೆ, ಅಂಗವೈಕಲ್ಯವನ್ನು ಹಿಮ್ಮೆಟ್ಟಿಸಿ ನಿರಂತರ ಪ್ರಯತ್ನದ ಮೂಲಕ ಪ್ರೊ ಫ್ರೀ ಸ್ಟೈಲ್ ರೆಸ್ಲರ್ ಆಗಿ ಪ್ರಸಿದ್ಧಿ ಹೊಂದಿದ್ದಾರೆ.
ಜಿಯೋನ್ ಕ್ಲಾಕ್ ಓಹಿಯೋ ಕಾಡಲ್ ರಿಗ್ರೇಶನ್ ಸಿಂಡ್ರೋಮ್ ಎಂಬ ಅನುವಂಶೀಯ ರೋಗದಿಂದ ಬಳಲುತ್ತಿದ್ದಾರೆ. ಲಕ್ಷದಲ್ಲಿ ಐವರಿಗೆ ಮಾತ್ರ ಬರುವ ಕಾಯಿಲೆ ಇದಾಗಿದ್ದು, ಈ ಕಾಯಿಲೆಯಿರುವವರಿಗೆ ಸೊಂಟದ ಕೆಳಗಿನ ಭಾಗದ ಬೆಳವಣಿಗೆಗೆ ಅನುಕೂಲವಾಗುವಂತೆ ಬೆನ್ನೆಲುಬು ಬೆಳೆಯುವುದಿಲ್ಲ.
ಎಲ್ಲ ಅಂಗವಿಕಲರಂತೆ ಐದು ವರ್ಷದವರೆಗೆ ಅಂಗವಿಕಲ ಮಕ್ಕಳ ಕೇಂದ್ರದಲ್ಲಿ ಬೆಳೆದರು. ನಂತರ ಕಿಂಬೆರ್ಲಿ ಎಂಬ ಮಹಿಳೆ ಅವರನ್ನು ದತ್ತು ಪಡೆದರು.
ನನ್ನ ಅಂಗವೈಕಲ್ಯ ನನ್ನ ಹಂಗಿಸುತ್ತಿತ್ತು. ನಡೆದಾಡಲು ಕಷ್ಟ ಪಡುತ್ತಿದ್ದ ನನ್ನ ಬಗ್ಗೆ ಹಲವರು ಅಪಹಾಸ್ಯ ಮಾಡುತ್ತಿದ್ದರು. ಆದರೆ, ದ್ವೇಷಿಗಳೇ ನಮ್ಮ ಹಿತೈಷಿಗಳು. ಅವರ ಹೀಯಾಳಿಕೆಗಳೇ ನನಗೆ ಸಾಧನೆ ಮಾಡಲು ಪ್ರೇರಣೆ ನೀಡಿದವು ಎನ್ನುತ್ತಾರೆ ಜಿಯೋನ್.
ಜಿಯೋನ್ ಮೊದಲು ಅಥ್ಲೆಟಿಕ್ ಬಗ್ಗೆ ಗಮನ ನೀಡುತ್ತಿದ್ದರು. ಕೆಲ ದಿನಗಳ ನಂತರ ರೆಸ್ಲಿಂಗ್ ಪ್ರಾರಂಭಿಸಿದರು. ಆದರೆ, ರೆಸ್ಲಿಂಗ್ ಎಂದರೆ ಏನು ಎಂಬುದೇ ಅವರಿಗೆ ಗೊತ್ತಿರಲಿಲ್ಲ. ಸಾಕಷ್ಟು ಸೋಲುಗಳ ಬಳಿಕ ಹಂತ ಹಂತವಾಗಿ ಕಲಿಯುತ್ತ ಪಟ್ಟುಗಳ ಕೌಶಲವನ್ನು ಪಡೆಯುತ್ತ ಹೋದರು. ತರಬೇತಿ ಶಾಲೆ ಅವರ ರೆಸ್ಲಿಂಗ್ ಅನುಭವವನ್ನು ಹೆಚ್ಚಿಸಿತು. ಇಂದು ಅವರು ವಾರದಲ್ಲಿ ಆರು ದಿನ, ದಿನಕ್ಕೆರಡು ಬಾರಿ ಕಸರತ್ತು ಮಾಡುತ್ತಾರೆ. ಪ್ರೊ ಫ್ರೀ ಸ್ಟೈಲ್ ರೆಸ್ಲರ್ ಆಗಿ ಪ್ರಸಿದ್ಧಿ ಹೊಂದಿದ್ದಾರೆ.