ಬಹರೇನ್: ಫಾರ್ಮುಲಾ ಒನ್ ರೇಸ್ ನಲ್ಲಿ ಕಾರ್ ಅಪಘಾತಕ್ಕೀಡಾಗಿ ಸ್ಪೋಟಗೊಂಡಿದೆ. ಅದೃಷ್ಟವಶಾತ್ ಫಾರ್ಮುಲಾ ಒನ್ ರೇಸ್ ಚಾಲಕ ರೋಮೈನ್ ಗ್ರಾಸ್ ಜೀನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಭಾನುವಾರ ತಡರಾತ್ರಿ ಬಹರೇನ್ ಫಾರ್ಮುಲಾ ಒನ್ ಗ್ರಾಂಡ್ ಪ್ರಿಕ್ಸ್ ಕಾರ್ ರೇಸ್ ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ರೋಮೈನ್ ಗ್ರಾಸ್ ಜೀನ್ ಅವರ ಕಾರ್ ಡೇನಿಯಲ್ ಕ್ವಾಟ್ ಅವರ ಕಾರ್ಟ್ ಟಚ್ ಮಾಡಿ ನಿಯಂತ್ರಣ ಕಳೆದುಕೊಂಡಿದ್ದು, ವೇಗವಾಗಿ ತಡೆಗೋಡೆಗೆ ಗುದ್ದಿ ಅಪಘಾತ ಸಂಭವಿಸಿದೆ. ಕ್ಷಣಾರ್ಧದಲ್ಲಿ ಕಾರ್ ಸ್ಪೋಟಿಸಿ ಬೆಂಕಿ ಹೊತ್ತಿಕೊಂಡಿದೆ. ಕೆಲ ಸೆಕೆಂಡ್ ಗಳಲ್ಲಿ ಕಾರ್ ನಿಂದ ಗ್ರಾಸ್ ಜೀನ್ ಜಿಗಿದಿದ್ದಾರೆ. ರಕ್ಷಣಾ ಸಿಬ್ಬಂದಿ ಕೂಡಲೇ ಅವರನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿರುವ ಗ್ರಾಸ್ ಜೀನ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
34 ವರ್ಷದ ಫ್ರೆಂಚ್ ಚಾಲಕ ಗ್ರಾಸ್ ಜೀನ್ ಭಾನುವಾರ ಮೊದಲ ಲ್ಯಾಪ್‌ನಲ್ಲಿ ಅತಿ ವೇಗದಲ್ಲಿ ಟ್ರ್ಯಾಕ್‌ನಿಂದ ಜಾರಿದ್ದು, ಕಾರ್ ತಡೆಗೋಡೆಗೆ ಬಡಿದು ಎರಡು ಭಾಗಗಳಾಗಿದ್ದು, ಸ್ಪೋಟದ ಜೊತೆಗೆ ಬೆಂಕಿ ಜ್ವಾಲೆ ಎದ್ದಿದೆ. ಅದರ ನಡುವೆಯೇ ಕ್ಷಣಾರ್ಧದಲ್ಲಿ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಕೂಡಲೇ ಅವರನ್ನು ಹೆಲಿಕಾಪ್ಟರ್ ಮೂಲಕ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ.