ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಲಸಿತ್ ಮಾಲಿಂಗ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದಾರೆ.
2011 ರಲ್ಲಿ ಟೆಸ್ಟ್ ನಿಂದ, 2019 ರಲ್ಲಿ ಏಕದಿನ ಪಂದ್ಯಗಳಿಂದ ಮತ್ತು ಜನವರಿಯಲ್ಲಿ ಫ್ರಾಂಚೈಸಿ ಕ್ರಿಕೆಟ್‌ನಿಂದ ನಿವೃತ್ತರಾದ ಮಾಲಿಂಗ ಮಂಗಳವಾರ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
38 ವರ್ಷದ ಮಾಲಿಂಗ ಅವರು ನನ್ನ ಶೂಗಳು ವಿಶ್ರಾಂತಿ ಪಡೆಯಲಿವೆ. ಆದರೆ, ನನ್ನ ಆಟದ ಮೇಲಿನ ಪ್ರೀತಿ ಎಂದಿಗೂ ವಿಶ್ರಾಂತಿ ಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಮಾಲಿಂಗ ತಮ್ಮ ನಿರ್ಧಾರವನ್ನು ಪ್ರಕಟಿಸುವ ಸಂದೇಶವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಟಿ20ಯಲ್ಲಿ ಅವರ ವಿಕೆಟ್ ಗಳ ಬಗ್ಗೆ ತೋರಿಸಿ, ನನ್ನ ಶೂಗಳು ವಿಶ್ರಾಂತಿ ಪಡೆಯಲಿದ್ದರೂ ಆಟದ ಮೇಲಿನ ನನ್ನ ಪ್ರೀತಿ ಎಂದಿಗೂ ವಿಶ್ರಾಂತಿ ಪಡೆಯುವುದಿಲ್ಲ ಎಂದು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.
ಕಳೆದ 17 ವರ್ಷಗಳಲ್ಲಿ ನಾನು ಗಳಿಸಿದ ಅನುಭವ ಇನ್ನು ಮುಂದೆ ಈ ಕ್ಷೇತ್ರದಲ್ಲಿ ಅಗತ್ಯವಿಲ್ಲ, ನಾನು ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಮಾತ್ರವಲ್ಲ, ಕ್ರಿಕೆಟ್‌ನ ಎಲ್ಲಾ ಮಾದರಿಗಳಿಂದ ನಿವೃತ್ತಿಯಾಗಿದ್ದೇನೆ ಎಂದು ಘೋಷಿಸಿದ್ದಾರೆ.
ಮಾಲಿಂಗ ಐಪಿಎಲ್‌ನಲ್ಲಿ ಇದುವರೆಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ 5 ಸಲ ಹ್ಯಾಟ್ರಿಕ್ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಎರಡು ಬಾರಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆದಿದ್ದಾರೆ. ಮಾಲಿಂಗ ಐಪಿಎಲ್ ನಲ್ಲಿ 170, ಟಿ20 ಯಲ್ಲಿ 107, ಏಕದಿನದಲ್ಲಿ 338, ಟೆಸ್ಟ್ ನಲ್ಲಿ 101 ವಿಕೆಟ್ ಪಡೆದಿದ್ದಾರೆ.