ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಎಲ್ಲ ಕ್ಷೇತ್ರಗಳ ಮೇಲೂ ಭಾರಿ ಪರಿಣಾಮ ಬೀರಿದೆ. ಇದರಿಂದಾಗಿ ಜನತೆ ತೀವ್ರ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದು, ಕ್ರೀಡೆ ಹಾಗೂ ಮನೋರಂಜನಾ ಕ್ಷೇತ್ರಗಳಿಗೆ ಕೊರೊನಾ ಹೆಚ್ಚಿನ ಹೊಡೆತ ನೀಡಿದೆ.
ಕೊರೊನಾ ಕಾರಣಕ್ಕೆ ಒಲಂಪಿಕ್ಸ್ ಒಂದು ವರ್ಷ ಮುಂದೂಡಿಕೆಯಾಗಿದ್ದು, ಆದರೆ ಕ್ರೀಡಾಪಟುಗಳಿಗೆ ತರಬೇತಿ ನಿರಂತರವಾಗಿ ಬೇಕಾಗುತ್ತದೆ. ಆದರೆ ಎಲ್ಲರೂ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಪ್ರಾಯೋಜಕತ್ವ ನೀಡಲು ಯಾರೂ ಮುಂದಾಗುತ್ತಿಲ್ಲ. ಇದು ಕ್ರೀಡಾಪಟುಗಳಿಗೆ ಸಂಕಷ್ಟ ತಂದೊಡ್ಡಿದೆ.
ಹೀಗಾಗಿ ಟೋಕಿಯೋ ಒಲಂಪಿಕ್ಸ್ ತರಬೇತಿಗಾಗಿ ಹಣ ಹೊಂದಿಸಿಕೊಳ್ಳಲು ಪರದಾಡುತ್ತಿರುವ ಭಾರತದ ವೇಗದ ಓಟಗಾರ್ತಿ ದ್ಯುತಿ ಚಂದ್ ತಮ್ಮ ಐಶಾರಾಮಿ ಬಿಎಂಡಬ್ಲ್ಯೂ ಕಾರನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ದ್ಯುತಿ ಚಂದ್ ಅವರಿಗೆ ತರಬೇತಿಗಾಗಿ ಪ್ರತಿ ತಿಂಗಳು 5 ಲಕ್ಷ ರೂಪಾಯಿಗಳು ಬೇಕಾಗಿದೆ ಎನ್ನಲಾಗಿದ್ದು, ಹೀಗಾಗಿ ಏಷ್ಯನ್ ಗೇಮ್ಸ್ ನಲ್ಲಿ ತಾವು ಪದಕ ಗೆದ್ದ ವೇಳೆ ಒಡಿಶಾ ಸರ್ಕಾರ ನೀಡಿದ್ದ 3 ಕೋಟಿ ರೂಪಾಯಿಗಳಲ್ಲಿ ಖರೀದಿಸಿದ್ದ 30 ಲಕ್ಷ ರೂಪಾಯಿ ಬೆಲೆಬಾಳುವ ಬಿಎಂಡಬ್ಲ್ಯೂ ಕಾರ್ ಮಾರಾಟಕ್ಕೆ ದ್ಯುತಿ ಚಂದ್ ನಿರ್ಧರಿಸಿದ್ದಾರೆ.