ಹೃದಯಾಘಾತದಿಂದ ಮೃತಪಟ್ಟ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ರಾಜಕೀಯವಾಗಿ ಸಾಕಷ್ಟು ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಕ್ಯೂಬಾದ ಕಮ್ಯೂನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ ಹಾಗೂ ಮರಡೋನಾ ನಡುವೆ ಸ್ನೇಹ ಮೀರಿದ ಸಂಬಂಧ ಇತ್ತೆಂದು ತಿಳಿದು ಬಂದಿದೆ.
ಮರಡೋನಾಗೆ ಫುಟ್ಬಾಲ್ ಎಷ್ಟು ಪ್ರಿಯವೋ ರಾಜಕೀಯವೂ ಅಷ್ಟೇ ಮೆಚ್ಚಿನ ಸಂಗತಿಯಾಗಿತ್ತು. ಸಾರ್ವಜನಿಕವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಹಂಚಿಕೊಳ್ಳಲು ಮರಡೋನಾ ಎಂದಿಗೂ ಹಿಂಜರಿದವರಲ್ಲ.
ಕ್ಯಾಸ್ಟ್ರೋ ಎಂದರೆ ಮರಡೋನಾಗೆ ಅದೆಷ್ಟು ಅಭಿಮಾನ ಇತ್ತೆಂದರೆ, ಅವರು ತಮ್ಮ ಎಡಗಾಲಿನ ಮೇಲೆ ಕ್ಯಾಸ್ಟ್ರೋ ಅವರ ಹಚ್ಚೆ ಹಾಕಿಸಿಕೊಂಡಿದ್ದರು. ಮರಡೋನಾ ಬಲಗೈ ಮೇಲೆ ಚೆ ಗುವೆರಾ ಅವರ ಹಚ್ಚೆ ಸಹ ಇತ್ತು.
1986ರಲ್ಲಿ ಅರ್ಜೆಂಟಿನಾ ತಂಡವನ್ನು ಫುಟ್ಬಾಲ್ ವಿಶ್ವಕಪ್ ಗೆಲುವಿನತ್ತ ಕೊಂಡೊಯ್ದ ಮಾರನೇ ವರ್ಷ ಕ್ಯಾಸ್ಟ್ರೋರನ್ನು ಭೇಟಿ ಮಾಡಿದ್ದ ಮರಡೋನಾ, 2000ನೇ ಇಸವಿ ಬಳಿಕ ಕಮ್ಯೂನಿಸ್ಟ್ ನಾಯಕನೊಂದಿಗೆ ತಮ್ಮ ಸಂಬಂಧವನ್ನು ಇನ್ನಷ್ಟು ನಿಕಟಗೊಳಿಸಿಕೊಂಡಿದ್ದರು.
ಮಾದಕ ದ್ರವ್ಯ ಕೊಕೇನ್ ಚಟದಿಂದ ಮುಕ್ತರಾಗಲು ಕ್ಯಾಸ್ಟ್ರೋ ತಮ್ಮ ಮೇಲೆ ಭಾರೀ ಪ್ರಭಾವ ಬೀರಿದ್ದರು ಎಂದು ಮರಡೋನಾ ಆಗಾಗ ಹೇಳಿಕೊಂಡಿದ್ದರು.