ಬೆಂಗಳೂರು: ಗದಗ ಜಿಲ್ಲೆಯ ಪವಿತ್ರಾ ಕುರ್ತಕೋಟಿ ಅವರಿಗೆ ಅಂತಾರಾಷ್ಟ್ರೀಯ ಸೈಕ್ಲಿಂಗ್ ಕ್ರೀಡೆಯಲ್ಲಿ ಭಾಗವಹಿಸಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ವಿಶೇಷ ಸೈಕಲ್ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೈಕಲ್ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಸಚಿವರಾದ ಎಸ್.ಟಿ. ಸೋಮಶೇಖರ್, ಸಿ.ಸಿ. ಪಾಟೀಲ್, ವಿ. ಸೋಮಣ್ಣ, ಕೆ.ಸಿ. ನಾರಾಯಣಗೌಡ ಮೊದಲಾದವರಿದ್ದರು.
ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಅಶೋಕ್, ರೇಣುಕಾ ದಂಪತಿ ಪುತ್ರಿಯಾಗಿರುವ ಪವಿತ್ರ 5ನೇ ತರಗತಿಯಿಂದ ಸೈಕ್ಲಿಂಗ್ ಕ್ರೀಡಾ ನಿಲಯದಲ್ಲಿ ಕಲಿಯುತ್ತಿದ್ದು, ಈಗ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾರೆ. ಅವರ ತಂದೆ ರೈತ ಕಾರ್ಮಿಕರಾಗಿದ್ದು, ಅವರ ತಾಯಿ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಅಡುಗೆ ಸಹಾಯಕಿಯಾಗಿದ್ದಾರೆ. ಅವರಿಗೆ ಪವಿತ್ರಾಗೆ ಅಗತ್ಯವಿರುವ ಸೈಕಲ್ ಕೊಡಿಸಲು ಸಾಧ್ಯವಾಗಿರಲಿಲ್ಲ.
ಇದರ ಬಗ್ಗೆ ವಾಹಿನಿಯೊಂದರಲ್ಲಿ ಸಂದರ್ಶನದ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಾಹಿತಿ ಸಿಕ್ಕಿದೆ. ಪವಿತ್ರಾಗೆ ಅಂತರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆಗೆ ಅಗತ್ಯ ಇರುವ ಸೈಕಲ್ ಕೊಡಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಕ್ರೀಡಾ ಇಲಾಖೆ ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಕ್ರಮಕೈಗೊಂಡು ನೆರವಿನೊಂದಿಗೆ 5 ಲಕ್ಷ ರೂ. ಬೆಲೆಯ ಸೈಕಲ್ ಕೊಡಿಸಿದ್ದು, ಇದನ್ನು ಸಿಎಂ ಹಸ್ತಾಂತರ ಮಾಡಿದ್ದಾರೆ. ಕೆನಡಾದಿಂದ ಈ ಸೈಕಲ್ ತರಿಸಲಾಗಿದ್ದು, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವ ಪವಿತ್ರಾ ಇನ್ನೂ ಹೆಚ್ಚಿನ ಸಾಧನೆ ಮಾಡಲು ಇದರಿಂದ ಅನುಕೂಲವಾಗಿದೆ ಎನ್ನಲಾಗಿದೆ.