ಭಾರತದ ಮಾಜಿ ಬ್ಯಾಟ್ಸ್ ಮನ್ ಸುರೇಶ್ ರೈನಾ ಈ ಬಾರಿ ಐಪಿಎಲ್‌ನಲ್ಲಿ ಆಡುತ್ತಿಲ್ಲ. ಆದ್ರೆ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಸೋಲಿನ ನಂತರ ರೈನಾ ಮತ್ತೆ ತಂಡಕ್ಕೆ ವಾಪಸ್ ಬರುವಂತೆ ಅನೇಕರು ಒತ್ತಾಯಿಸಿದ್ದಾರೆ. ಆದರೆ ಸುರೇಶ್ ರೈನಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ದಾರಿ ಬೇರೆ ಬೇರೆಯಾದಂತಿದೆ.
ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ರೈನಾ ಸಿ.ಎಸ್.ಕೆ. ಫಾಲೋ ಮಾಡುವುದನ್ನು ನಿಲ್ಲಿಸಿದ್ದಾರೆ. ವರದಿಗಳ ಪ್ರಕಾರ, ರೈನಾ ಶನಿವಾರದಿಂದ ಸಿ.ಎಸ್.ಕೆ. ಫಾಲೋ ಮಾಡುವುದನ್ನು ನಿಲ್ಲಿಸಿದ್ದಾರೆ. ವೈಯಕ್ತಿಕ ಕಾರಣಗಳಿಗಾಗಿ ಐಪಿಎಲ್ ಪ್ರಾರಂಭವಾಗುವ ಮುನ್ನ ರೈನಾ ಭಾರತಕ್ಕೆ ವಾಪಸ್ ಆಗಿದ್ದರು. ನಂತರ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್. ಶ್ರೀನಿವಾಸನ್ ರೈನಾ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಶುಕ್ರವಾರ ಚೆನ್ನೈ ಎರಡನೇ ಸೋಲು ಕಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ರೈನಾ ವಾಪಸ್ ಆಗುವಂತೆ ಒತ್ತಾಯಿಸುತ್ತಿದ್ದರು. ತಂಡದ ತರಬೇತುದಾರ ಸ್ಟೀಫನ್ ಪ್ಲೆಮಿಂಗ್, ಭಾನುವಾರ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಸೋಲಿನ ನಂತರ ರೈನಾ ಮತ್ತು ರಾಯುಡು ಅನುಪಸ್ಥಿತಿಯಿಂದಾಗಿ ತಮ್ಮ ತಂಡ ಸೋಲುಂಡಿದೆ ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿ.ಎಸ್.ಕೆ. ಸಿಇಒ ಕಾಶಿ ವಿಶ್ವನಾಥನ್, ರೈನಾ ಹಿಂದಿರುಗುವುದು ಕಷ್ಟ. ರೈನಾರನ್ನು ಮರಳಿ ಕರೆತರಲು ಪ್ರಯತ್ನಿಸುತ್ತಿಲ್ಲ. ಅವರೇ ವಾಪಸ್ ಹೋಗಿದ್ದಾರೆ. ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಕ್ರಿಕೆಟ್‌ನಲ್ಲಿ ಸೋಲು ಮತ್ತು ಗೆಲುವು ಇರುತ್ತೆ ಎಂದಿದ್ದಾರೆ. ಇದಾದ ನಂತ್ರ ರೈನಾ, ಸಿ.ಎಸ್.ಕೆ. ಫಾಲೋ ಮಾಡುವುದನ್ನು ನಿಲ್ಲಿಸಿದ್ದಾರೆ ಎನ್ನಲಾಗ್ತಿದೆ.