ಮಾಜಿ ಕ್ರಿಕೆಟಿಗರೊಬ್ಬರು ತಮ್ಮ ಮಗನಿಂದಲೇ ಕೊಲೆಯಾದ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದ್ದು, ಇದೀಗ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೇರಳ ಪರ ರಣಜಿ ಪಂದ್ಯಗಳನ್ನಾಡಿದ್ದ 65 ವರ್ಷದ ಜಯಮೋಹನ್ ತಂಬಿ ಕೊಲೆಯಾದವರಾಗಿದ್ದು, ಇವರ ಪುತ್ರ 33 ವರ್ಷದ ಅಶ್ವಿನ್ ತನ್ನ ತಂದೆಯ ತಲೆಗೆ ಹೊಡೆದು ಹತ್ಯೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ಸೋಮವಾರದಂದು ಅಕ್ಕಪಕ್ಕದ ಮನೆಯವರಿಗೆ ಕೆಟ್ಟವಾಸನೆ ಬಂದ ಕಾರಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ಪರಿಶೀಲನೆ ನಡೆಸಿದ ವೇಳೆ ಜಯಮೋಹನ್ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು.
ಪರೀಕ್ಷೆ ವೇಳೆ ತಲೆಗೆ ಏಟು ಬಿದ್ದು ಅವರು ಸಾವನ್ನಪ್ಪಿರುವುದು ಬಹಿರಂಗವಾಗಿದ್ದು, ತಂದೆ – ಮಗನ ನಡುವೆ ಜಟಾಪಟಿ ನಡೆದಾಗ ಅಶ್ವಿನ್ ಹೊಡೆದಿರುವ ಪರಿಣಾಮ ಈ ಸಾವು ಸಂಭವಿಸಿರಬಹುದು ಎಂದು ಹೇಳಲಾಗಿದೆ. ಅಶ್ವಿನ್ ನನ್ನು ಈಗ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.