ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಕೊರೊನಾದಿಂದ ಸಂಕಷ್ಟದಲ್ಲಿರುವ ಭಾರತಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾ ನೆರವಿನ ಹಸ್ತ ನೀಡಿದೆ. ಸೋಮವಾರ, ಕೊರೊನಾ ಯುದ್ಧದ ಹೋರಾಟದಲ್ಲಿ ಭಾರತಕ್ಕೆ ನೆರವಾಗುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಣೆ ಮಾಡಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಅಧಿಕೃತ ಟ್ವೀಟರ್ ಹ್ಯಾಂಡಲ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಕೊರೊನಾ ಬಿಕ್ಕಟ್ಟು ಎದುರಿಸಲು 50 ಸಾವಿರ ಡಾಲರ್ ಅಂದರೆ ಸುಮಾರು 37 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುವುದಾಗಿ ಘೋಷಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾದ ಜೊತೆಗೆ ಆಸ್ಟ್ರೇಲಿಯಾ ಕ್ರಿಕೆಟ್ ಅಸೋಸಿಯೇಷನ್ ಮತ್ತು ಯುನಿಸೆಫ್ ಆಸ್ಟ್ರೇಲಿಯಾ ಭಾರತಕ್ಕೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸಲಿವೆ.
ಭಾರತ-ಆಸ್ಟ್ರೇಲಿಯಾ ಮಧ್ಯೆ ಉತ್ತಮ ಸ್ನೇಹವಿದೆ. ಹಿಂದಿನ ವಾರ ಪ್ಯಾಟ್ ಕಮ್ಮಿನ್ಸ್ ಮತ್ತು ಬ್ರೆಟ್ ಲೀ ಭಾರತಕ್ಕೆ ಸಹಾಯ ಮಾಡಿ ನಮ್ಮ ಹೃದಯ ಗೆದ್ದಿದ್ದಾರೆ. ಅವರ ದಾರಿಯಲ್ಲೇ ನಾವು ನಡೆಯಲಿದ್ದು, ಭಾರತಕ್ಕೆ ಹಣ ಸಹಾಯ ಮಾಡಲಿದ್ದೇವೆಂದು ಕ್ರಿಕೆಟ್ ಆಸ್ಟ್ರೇಲಿಯಾದ ಹಂಗಾಮಿ ಸಿಇಒ ನಿಕ್ ಹಾಲೆ ಹೇಳಿದ್ದಾರೆ. ಆಮ್ಲಜನಕ, ಪರೀಕ್ಷಾ ಕಿಟ್ ಸೇರಿದಂತೆ ಲಸಿಕೆಗೆ ಸಂಬಂದಿಸಿದ ನೆರವು ನೀಡುವುದಾಗಿ ನಿಕ್ ಹಾಲೆ ಹೇಳಿದ್ದಾರೆ.