ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೆ ಮೊದಲು ಟೀಂ ಇಂಡಿಯಾಗೆ ಕೊರೋನಾ ಕಾಟ ಶುರುವಾಗಿದೆ.
ಶಿಖರ್ ಧವನ್, ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕವಾಡ್, ನವದೀಪ್ ಸೈನಿ ಹಾಗೂ ಮೂವರು ಸಹಾಯಕ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು ಅವರನ್ನು ಐಸೋಲೇಶನ್ ನಲ್ಲಿ ಇರಿಸಲಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಪೆಬ್ರವರಿ 6 ರಂದು ಅಹಮದಾಬಾದ್ ನಲ್ಲಿ ಏಕದಿನ ಪಂದ್ಯ ನಡೆಯಲಿದ್ದು, ಇದು ಭಾರತದ 1000 ನೇ ಪಂದ್ಯವಾಗಿದೆ. ಭಾರತ ತಂಡ 1974 ರಲ್ಲಿ ಇಂಗ್ಲೆಂಡ್ ವಿರುದ್ಧ ಲೀಡ್ಸ್ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯವಾಡಿತ್ತು. 1000 ನೇ ಏಕದಿನ ಪಂದ್ಯವಾಡುತ್ತಿರುವ ವಿಶ್ವದ ಮೊದಲ ಕ್ರಿಕೆಟ್ ತಂಡ ಟೀಂ ಇಂಡಿಯಾ ಆಗಿದ್ದು, ಸರಣಿಗೆ ಮೊದಲೇ ಆಟಗಾರರಿಗೆ ಕೊರೋನಾ ಸೋಂಕು ತಗುಲಿರುವುದರಿಂದ ತಂಡದಲ್ಲಿ ಬದಲಾವಣೆ ಮಾಡಲಾಗುವುದು ಎನ್ನಲಾಗಿದೆ.
ಆಸ್ಟ್ರೇಲಿಯಾ 958, ಪಾಕಿಸ್ತಾನ 936 ಪಂದ್ಯಗಳನ್ನು ಆಡಿವೆ. ಭಾರತ ತಂಡ 518 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 431 ಪಂದ್ಯಗಳಲ್ಲಿ ಸೋಲು ಕಂಡಿದೆ. 9 ಪಂದ್ಯಗಳು ಟೈ ಆಗಿದ್ದು, 41 ಪಂದ್ಯಗಳು ರದ್ದುಗೊಂಡಿವೆ.