ಇಂದು ಶಾರ್ಜಾದಲ್ಲಿ ನಡೆದ ಐಪಿಎಲ್ ನ 17 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ ನಾಯಕ ರೋಹಿತ್ ಶರ್ಮ 6 ರನ್ ಗಳಿಸಿ ಸಂದೀಪ್ ಶರ್ಮ ಬೌಲಿಂಗ್‌ನಲ್ಲಿ ಔಟಾದರು. ನಂತರ ಬಂದ ಸೂರ್ಯಕುಮಾರ್ ಯಾದವ್ 27 ರನ್ ಗಳಿಸಿ ಔಟಾದರು. ಕ್ವಿಂಟನ್ ಡಿ ಕಾಕ್ 39 ಎಸೆತಗಳಲ್ಲಿ (67) ರನ್ ಗಳಿಸಿದ್ದು, ರಷೀದ್ ಖಾನ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಬಂದ ಇಶಾನ್ ಕಿಶನ್ ಕೂಡ 31 ರನ್ ಗಳಿಸಿ ಔಟಾದರು. ನಂತರ ಹಾರ್ದಿಕ್ ಪಾಂಡ್ಯ ಹಾಗೂ ಕೈರನ್ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್ ತೋರಿದರು. ನಂತರ ಹಾರ್ದಿಕ್ ಪಾಂಡ್ಯ 28 ರನ್ ಗಳಿಸಿದ್ದು, ಸಿದ್ಧಾರ್ಥ್ ಕೌಲ್ ಅವರಿಗೆ ಕೊನೆ ಓವರ್ ನಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಕೃನಾಲ್ ಪಾಂಡ್ಯ ಕೇವಲ 4 ಎಸೆತಗಳಲ್ಲಿ 20 ರನ್ ಗಳಿಸುವ ಮೂಲಕ ಇನ್ನೂರರ ಗಡಿ ತಲುಪಲು ನೆರವಾದರು. ಒಟ್ಟಾರೆ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್ ನಷ್ಟಕ್ಕೆ 208 ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಆರಂಭದಲ್ಲಿ ಜಾನಿ ಬೈರ್ ಸ್ಟೋವ್ 25 ರನ್ ಗಳಿಸಿ ಔಟಾದರು. ಆರಂಭಿಕ ಆಟಗಾರ ನಾಯಕ ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ನಂತರ ಮನೀಶ್ ಪಾಂಡೆ 30 ರನ್ ಗಳಿಸಿ ಜೇಮ್ಸ್ ಪ್ಯಾಟಿನ್ಸನ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಕೇನ್ ವಿಲಿಯಮ್ಸನ್ ಕೇವಲ 3 ರನ್ ಗಳಿಸಿ ಟ್ರೆಂಟ್ ಬೋಲ್ಟ್ ಬೌಲಿಂಗ್‌ನಲ್ಲಿ ಔಟಾದರು. ಪ್ರಿಯಮ್ ಗರ್ಗ್ 8 ರನ್ ಗಳಿಸಿ ಔಟಾಗಿದ್ದು, ನಂತರ ಆರಂಭಿಕ ಆಟಗಾರ ನಾಯಕ ಡೇವಿಡ್ ವಾರ್ನರ್ 44 ಎಸೆತಗಳಲ್ಲಿ 60 ರನ್ ಗಳಿಸಿದ್ದು ಔಟಾದರು. ಸತತ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಸನ್ ರೈಸರ್ಸ್ ತಂಡ 7 ವಿಕೆಟ್ ನಷ್ಟಕ್ಕೆ 174ರನ್ ಗಳಿಸಿದರು ಗುರಿ ತಲುಪುವಲ್ಲಿ ವಿಫಲವಾದರು. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 34 ರನ್ ಗಳಿಂದ ಭರ್ಜರಿ ಜಯ ಸಾಧಿಸಿತು.