ಜಕಾರ್ತ: ಏಷ್ಯಾ ಕಪ್ -2022 ಹಾಕಿ ಟೂರ್ನಿಯ ಸೂಪರ್ 4 ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ಶುಭಾರಂಭ ಮಾಡಿದ್ದು, 2-1 ಗೋಲುಗಳಿಂದ ಜಪಾನ್ ಮಣಿಸಿದೆ. ಮಂಜೀತ್ ಮತ್ತು ಪವನ್ ಉತ್ತಮ ಪ್ರದರ್ಶನದ ನೆರವಿನಿಂದ ಸೂಪರ್ 4 ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತ 2-1 ರಿಂದ ಗೆಲುವು ಕಂಡಿದೆ.
ಮೊದಲ ಕ್ವಾರ್ಟರ್‌ನ 7 ನೇ ನಿಮಿಷದಲ್ಲಿ ಮಂಜೀತ್ ಭಾರತಕ್ಕಾಗಿ ಅದ್ಭುತವಾದ ಏಕವ್ಯಕ್ತಿ ಗೋಲು ಗಳಿಸಿದರು, ಎರಡನೇ ಕ್ವಾರ್ಟರ್‌ನಲ್ಲಿ ಟಕುಮಾ ನಿವಾ ಸ್ಕೋರ್ 1-1 ಅನ್ನು ಸಮಗೊಳಿಸಿದರು. ಭಾರತವು ಮೂರನೇ ಕ್ವಾರ್ಟರ್ ನಲ್ಲಿ ಪವನ್ ರಾಜ್ ಭರ್ ಮೂಲಕ ಅದ್ಭುತ ಪುನರಾಗಮನವನ್ನು ಮಾಡಿ ಒಂದು ಗೋಲಿನ ಮುನ್ನಡೆ ಸಾಧಿಸಿದೆ. ಭಾರತದ ಪರ ಮಂಜೀತ್ ಮತ್ತು ಪವನ್ ರಾಜ್ ಭರ್ ಎರಡು ಗೋಲುಗಳನ್ನು ಗಳಿಸಿದರು. ಜಪಾನ್ ಪರ ನ್ಯೂವಾ ಟಕುಮಾ ಏಕೈಕ ಸ್ಕೋರರ್ ಆಗಿದ್ದಾರೆ.
ಈ ಮೂಲಕ ಗುಂಪು ಹಂತದಲ್ಲಿ ಜಪಾನ್ ವಿರುದ್ಧ 2 -5 ಗೋಲುಗಳಿಂದ ಪರಾಭವಗೊಂಡಿದ್ದ ಭಾರತ ಇಂದಿನ ಗೆಲುವಿನೊಂದಿಗೆ ಸೇಡು ತೀರಿಸಿಕೊಂಡಿದ್ದು, ಫೈನಲ್ ಪ್ರವೇಶದ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಜಪಾನ್ ಮಣಿಸಿದ ಭಾರತ ನಂತರ ದಕ್ಷಿಣ ಕೊರಿಯಾ, ಮಲೇಷ್ಯಾ ಎದುರಿಸಬೇಕಿದೆ. ಎಲ್ಲಾ ತಂಡಗಳು ಒಂದೊಂದು ಸಲ ಮುಖಾಮುಖಿಯಾಗಲಿದ್ದು, ಅಗ್ರ 2 ತಂಡಗಳು ಫೈನಲ್ ಪ್ರವೇಶಿಲಿವೆ.