
ಮೂರು ದಶಕಗಳ ಬಳಿಕ ಬ್ರಿಸ್ಬೇನ್ ಅಂಗಳದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಟೆಸ್ಟ್ ಸೋಲಿನ ರುಚಿ ತೋರಿದ ಭಾರತ ಸರಣಿಯನ್ನು 2-1ರಲ್ಲಿ ತನ್ನದಾಗಿಸಿಕೊಂಡ ಘಳಿಗೆಯನ್ನು ದೇಶದ ಕ್ರಿಕೆಟ್ ಅಭಿಮಾನಿಗಳು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
ಅಡಿಲೇಡ್ನಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ಬಳಿಕ ಟೀಂ ಇಂಡಿಯಾದ 0-4 ವೈಟ್ವಾಶ್ ಆಗುವದೇ ಗತಿ ಎಂದು ಭವಿಷ್ಯ ನುಡಿದಿದ್ದ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್, ಮೈಕ್ ವಾನ್, ಮೈಕೆಲ್ ಕ್ಲಾರ್ಕ್, ಮಾರ್ಕ್ ವಾ ಹಾಗೂ ಬ್ರಾಡ್ ಹಡ್ಡಿನ್ ತಮ್ಮ ಮಾತುಗಳನ್ನು ತಾವೇ ನುಂಗುವಂತೆ ಆಗಿದೆ.
ಟ್ವಿಟ್ಟರ್ನಲ್ಲಂತೂ ನೆಟ್ಟಿಗರು ಈ ಐವರನ್ನು ಹಿಗ್ಗಾಮುಗ್ಗಾ ಲೇವಡಿ ಮಾಡಿದ್ದು, ಮೀಮ್ಗಳ ಸುರಿಮಳೆಯೇ ಹರಿಯುತ್ತಿದೆ.
ಇದೇ ವೇಳೆ ಟೀಂ ಇಂಡಿಯಾ ಆಟಗಾರ ರವಿಚಂದ್ರನ್ ಅಶ್ವಿನ್ ತಮ್ಮ ಟ್ವೀಟ್ ಒಂದರಲ್ಲಿ ಮೇಲ್ಕಂಡ ಐವರ ಹೇಳಿಕೆಗಳ ಪತ್ರಿಕೆಯ ತುಂಡುಗಳನ್ನು, ಕಪ್ ಜೊತೆಗೆ ನಿಂತಿರುವ ಟೀಂ ಇಂಡಿಯಾ ಫೋಟೋ ಜೊತೆಗೆ ಅಂಟಿಸುವ ಮೂಲಕ ಸಖತ್ ಟ್ರೋಲ್ ಮಾಡಿದ್ದಾರೆ.
“ನಿಮ್ಮ ಪದಗಳನ್ನು ಹೇಗೆ ತಿನ್ನಲು ಇಚ್ಛಿಸುತ್ತೀರಿ? ಗ್ರಿಲ್, ಫ್ರೈ, ಬೇಕ್… ಚಪಾತಿ ಅಥವಾ ದೋಸೆಯಲ್ಲಿ ಸುತ್ತಿಕೊಂಡು?,” ಎಂದು ಉದ್ಯಮಿ ಆನಂದ್ ಮಹಿಂದ್ರಾ ಸಹ ತಮ್ಮ ಟ್ವೀಟ್ನಲ್ಲಿ ಈ ಐವರ ಕಾಲೆಳೆದಿದ್ದಾರೆ.