ದೇಶದಲ್ಲಿ ಕ್ರಿಕೆಟ್ ಹಾಗೂ ಸಿನಿಮಾ ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದವರ ಪಾಡು ಬಹಳ ಬೇಸರ ತರುವ ಮಟ್ಟದಲ್ಲಿರುವುದು ಹೊಸ ವಿಷಯವೇನಲ್ಲ. ಕ್ರಿಕೆಟ್ ಹೊರತುಪಡಿಸಿ ಮಿಕ್ಕ ಕ್ರೀಡೆಗಳಲ್ಲಿ ಎಂಥದ್ದೇ ಪ್ರತಿಭೆಗಳು ಅರಳುತ್ತಿದ್ದರೂ ಅವರಿಗೆ ಅಷ್ಟೊಂದು ಬೆಂಬಲವಾಗಲಿ ಆರ್ಥಿಕ ಚೈತನ್ಯವಾಗಲೀ ಸಿಗುವುದಿಲ್ಲ.
ಇಂಥ ಬೇಸರದ ಉದಾಹರಣೆಗಳಲ್ಲಿ ಒಬ್ಬರು ಅಬಿದ್ ಖಾನ್. ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಮಾಜಿ ವಿದ್ಯಾಥಿಯಾದ ಅಬಿದ್ ವೃತ್ತಿಪರ ಬಾಕ್ಸರ್ ಆಗಿದ್ದು ಪಂಜಾಬ್ ವಿವಿಯನ್ನು ಅನೇಕ ಬಾರಿ ಪ್ರತಿನಿಧಿಸಿದ್ದಾರೆ. ಕೋಚಿಂಗ್‌ನಲ್ಲಿ ಡಿಪ್ಲೊಮಾ ಮುಗಿಸಿದ ಬಳಿಕ ತಮ್ಮ ಅನುಭವವನ್ನು ಕಿರಿಯರಿಗೆ ಧಾರೆ ಎರೆಯಲು ಮುಂದಾಗಿದ್ದಾರೆ ಅಬಿದ್.
ಆದರೆ ಜೀವನದ ಏಳುಬೀಳುಗಳು ಅವರನ್ನು ತಮ್ಮ ಪ್ರೀತಿಯ ಕ್ರೀಡೆ ತೊರೆಯುವಂತೆ ಮಾಡಿವೆ. ತಮ್ಮ ಜೀವನೋಪಾಯಕ್ಕಾಗಿ ಚಂಡೀಗಡದಲ್ಲಿ ಆಟೋ ಓಡಿಸಿಕೊಂಡು ಇರುವ ಅಬಿದ್, ನಗರದ ಹೋಲ್‌ಸೇಲ್ ಮಾರುಕಟ್ಟೆಗೆ ದವಸದ ಮೂಟೆಗಳನ್ನು ಸಾಗಾಟ ಮಾಡುತ್ತಿದ್ದಾರೆ.
ಗಿನ್ನಿಸ್ ದಾಖಲೆ ಸೇರ್ಪಡೆಯತ್ತ ‘ಮುಖ್ಯಮಂತ್ರಿ’ ನಾಟಕ
’ಸ್ಪೋರ್ಟ್‌ಗಾಂವ್’ ಎಂಬ ಪೇಜ್ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಖಾನ್ ತಮ್ಮ ಜೀವನದ ಹೋರಾಟಗಳ ಬಗ್ಗೆ ಮಾತನಾಡಿದ್ದಾರೆ. ನಿವೃತ್ತಿಯ ವಯಸ್ಸು ದಾಟಿದ್ರೂ ಸಹ ಟೀನೇಜ್ ಹುಡುಗರಷ್ಟೇ ಉತ್ಸಾಹದಿಂದ ತಮ್ಮ ಬಾಕ್ಸಿಂಗ್ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ ಅಬಿದ್.
“ನನಗೆ ಯಾವುದೇ ಉದ್ಯೋಗ ಸಿಗಲಿಲ್ಲ. ಬಹಳಷ್ಟು ಹುಡುಕಾಡಿದ ಬಳಿಕ ಭರವಸೆ ಕಳೆದುಕೊಂಡು ಇಲ್ಲಿಗೆ ಬಂದು ಆಟೋ ಓಡಿಸಲು ನಿರ್ಧರಿಸಿದೆ” ಎಂದು ಯಾವುದೇ ಕ್ಷೇತ್ರದಲ್ಲೂ ಉದ್ಯೋಗ ಸಿಗದೆ ಇದ್ದ ತಮ್ಮ ದುರದೃಷ್ಟದ ಕಥೆಯನ್ನು ಹೇಳಿದ್ದಾರೆ ಅಬಿದ್.