ಲಂಡನ್: ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ನೂತನ ದಾಖಲೆ ಸೃಷ್ಟಿಯಾಗಿದೆ. 166 ಜೊತೆಯಾಟದಲ್ಲಿ ಒಬ್ಬ 160 ರನ್ ಗಳಿಸಿದ್ದು, ಮತ್ತೊಬ್ಬ ಕೇವಲ ಒಂದೇ ಒಂದು ರನ್ ಗಳಿಸಿದ್ದಾರೆ.
ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್ ತಂಡದ ಆಲ್ ರೌಂಡರ್ 45 ವರ್ಷದ ಡರೇನ್ ಸ್ಟೀವೆನ್ಸ್ 149 ಎಸೆತಗಳಲ್ಲಿ 15 ಬೌಂಡರಿ, 15 ಸಿಕ್ಸರ್ ಸಹಿತ 190 ರನ್ ಗಳಿಸಿ ಔಟಾಗಿದ್ದಾರೆ. ಮಿಗ್ಯುಯೆಲ್ ಕಮಿನ್ಸ್ 61 ಎಸೆತದಲ್ಲಿ ಕೇವಲ 7 ರನ್ ಗಳಿಸಿದ್ದಾರೆ.
ಗ್ಲ್ಯಾಮೋರ್ಗನ್ ವಿರುದ್ಧ ನಡೆದ ಪಂದ್ಯದಲ್ಲಿ ಸ್ಟೀವನ್ಸ್ ಮತ್ತು ಮಿಗ್ಯುಯೆಲ್ ಕಮಿನ್ಸ್ ಮೊದಲ ಇನಿಂಗ್ಸ್ ನಲ್ಲಿ 9 ನೇ ವಿಕೆಟ್ ಗೆ 166 ರನ್ ಜೊತೆಯಾಟವಾಡಿರುವುದು ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಹೊಸ ದಾಖಲೆಯಾಗಿದೆ.
ಈ ಜೊತೆಯಾಟದಲ್ಲಿ ಶೇಕಡ 90 ಕ್ಕಿಂತ ಹೆಚ್ಚು ರನ್ ಒಬ್ಬನೇ ಬ್ಯಾಟ್ಸ್ ಮನ್ ಗಳಿಸಿದ್ದು ದಾಖಲೆಯಾಗಿದೆ. ಸ್ಟೀವನ್ಸ್ 160 ರನ್, ಮಿಗ್ಯುಯೆಲ್ ಕಮಿನ್ಸ್ 1 ರನ್ ಗಳಿಸಿದ್ದಾರೆ. ಇತರೆ 5 ರನ್ ಗಳು ಬಂದಿವೆ.
ಕೆಂಟ್ ತಂಡ 128 ರನ್ ಗೆ 8 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಸ್ಟೀವನ್ಸ್ ಮತ್ತು ಮಿಗ್ಯುಯೆಲ್ ಜೊತೆಯಾಗಿದ್ದು, 27.1 ಓವರ್ ನಲ್ಲಿ 166 ರನ್ ಪೇರಿಸಿದ್ದಾರೆ.