ಐಪಿಎಲ್ನಲ್ಲಿ 3 ಪಂದ್ಯಗಳಲ್ಲಿ 2 ಸೋಲುಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ಆತಂಕದಲ್ಲಿದೆ. ಧೋನಿಯ ತಂಡ ಪಾಯಿಂಟ್ಸ್ ಟೇಬಲ್ನ ಕೆಳ ಭಾಗದಲ್ಲಿದೆ. ಈ ಮಧ್ಯೆ ಚೆನ್ನೈ ಸೂಪರ್ ಕಿಂಗ್ಸ್ ಹಿರಿಯ ಅನುಭವಿ ಆಟಗಾರರಾದ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರನ್ನು ತಂಡದಿಂದ ತೆಗೆದು ಹಾಕಲು ತಯಾರಿ ನಡೆಸುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಇಬ್ಬರು ಆಟಗಾರರ ಒಪ್ಪಂದವನ್ನು ಕೊನೆಗೊಳಿಸಲು ಸಿಎಸ್ಕೆ ಸಿದ್ಧತೆ ನಡೆಸಿದೆ. ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಈ ಇಬ್ಬರು ಆಟಗಾರರು ಈ ಬಾರಿ ಐಪಿಎಲ್ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ಈ ಇಬ್ಬರು ಆಟಗಾರರನ್ನು ತಂಡದಿಂದ ತೆಗೆದು ಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಸಿಎಸ್ಕೆ ಈಗಾಗಲೇ ಈ ಇಬ್ಬರ ಹೆಸರನ್ನು ತಮ್ಮ ಅಧಿಕೃತ ವೆಬ್ಸೈಟ್ನಿಂದ ತೆಗೆದು ಹಾಕಿದೆ. ಸುರೇಶ್ ರೈನಾ ವಾಪಸ್ ಕರೆಸುವ ಬಗ್ಗೆ ತಂಡ ಪ್ರಯತ್ನ ನಡೆಸುವುದಿಲ್ಲ. ಇದು ಅವರ ನಿರ್ಧಾರವೆಂದು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದರು. ಇದಾದ ನಂತ್ರ ರೈನಾ ಸಿಎಸ್ಕೆ ಟ್ವಿಟರ್ ಅನ್ಫಾಲೋ ಮಾಡಿದ್ದರು.
ಸುರೇಶ್ ರೈನಾ ಜೊತೆ 11 ಕೋಟಿ ಹಾಗೂ ಹರ್ಭಜನ್ ಸಿಂಗ್ ಜೊತೆ 2 ಕೋಟಿ ರೂಪಾಯಿ ಒಪ್ಪಂದವನ್ನು ಸಿಎಸ್ಕೆ ಮಾಡಿತ್ತು. ಆದ್ರೆ ಇಬ್ಬರೂ ಆಟಗಾರರು ಐಪಿಎಲ್ ನಿಂದ ಹೊರ ಬಿದ್ದಿರುವ ಕಾರಣ ಇವರಿಗೆ ಯಾವುದೇ ಹಣ ಸಿಗುವುದಿಲ್ಲ. ಇಬ್ಬರು ಆಟಗಾರರು ಮುಂದಿನ ಬಾರಿ ಬೇರೆ ತಂಡ ಸೇರುವ ಸಾಧ್ಯತೆಯಿದೆ.