ಮಂಗಳವಾರ ಅಬುಧಾಬಿಯಲ್ಲಿ ನಡೆದ ಐಪಿಎಲ್ ನ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 23ರನ್ ಗಳಿಸಿ ಔಟಾದರು. ನಂತರ ನಾಯಕ ರೋಹಿತ್ ಶರ್ಮ 35 ರನ್ ಗಳಿಸಿ ಶ್ರೇಯಸ್ ಗೋಪಾಲ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದು, ಇಶಾನ್ ಕಿಶನ್ ಶೂನ್ಯ ರನ್ ಗಳಿಸಿ ಔಟಾದರು. ಬಳಿಕ ಬಂದ ಕೃನಾಲ್ ಪಾಂಡ್ಯ 12ರನ್ ಗಳಿಸಿ ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಔಟಾದರು. ಸೂರ್ಯಕುಮಾರ್ ಯಾದವ್ 47 ಎಸೆತಗಳಲ್ಲಿ (79)ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು. ಹಾರ್ದಿಕ್ ಪಾಂಡ್ಯ 30 ರನ್ ಗಳಿಸಿದ್ದು, ಒಟ್ಟಾರೆ ಮುಂಬೈ ಇಂಡಿಯನ್ಸ್ ತಂಡ 4 ವಿಕೆಟ್ ನಷ್ಟಕ್ಕೆ 193ರನ್ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಶೂನ್ಯ ರನ್ ಗಳಿಸಿ ಔಟಾದರು. ನಂತರ ಬಂದ ನಾಯಕ ಸ್ಟೀವ್ ಸ್ಮಿತ್ 6 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ಔಟಾದರು. ಜೋಸ್ ಬಟ್ಲರ್ ಏಕಾಂಗಿ ಹೋರಾಟ ನಡೆಸಿದ್ದು, ಸಂಜು ಸಾಮ್ಸನ್ ಶೂನ್ಯಕ್ಕೆ ಔಟಾದರು. ಲೊಮ್ರೊರ್ 11 ರನ್ ಗಳಿಸಿ ರಾಹುಲ್ ಚಾಹರ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಜೋಸ್ ಬಟ್ಲರ್ 44 ಎಸೆತಗಳಲ್ಲಿ (70) ರನ್ ಗಳಿಸಿದ್ದು, ಜೇಮ್ಸ್ ಪ್ಯಾಟಿನ್ಸನ್ ಬೌಲಿಂಗ್ ನಲ್ಲಿ ಔಟಾದರು. ಸತತ ವಿಕೆಟ್ ಗಳನ್ನು ಕಳೆದುಕೊಂಡು ರಾಜಸ್ಥಾನ್ ರಾಯಲ್ಸ್ ತಂಡ 136 ರನ್ ಗಳಿಸಿ ಆಲೌಟ್ ಆಗಿದ್ದು, ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 57 ರನ್ ಗಳ ಭರ್ಜರಿ ಜಯ ಸಾಧಿಸಿತು.