ಇಂದು ಅಬುಧಾಬಿಯಲ್ಲಿ ನಡೆದ ಐಪಿಎಲ್ 15ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲಿ ನಾಯಕ ಸ್ಟೀವ್ ಸ್ಮಿತ್ ಕೇವಲ 5 ರನ್ ಗಳಿಸಿ ಔಟಾದರು. ನಂತರ ಜೋಸ್ ಬಟ್ಲರ್ ಕೂಡ 22 ರನ್ ಗಳಿಸಿ ನವದೀಪ್ ಸೈನಿ ಬೌಲಿಂಗ್‌ನಲ್ಲಿ ಔಟಾದರು.
ಸಂಜು ಸಾಮ್ಸನ್ ಕೂಡ ಕೇವಲ 4 ರನ್ ಗಳಿಸಿ ಚಾಹಲ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದ್ದು, ನಂತರ ಬಂದ ರಾಬಿನ್ ಉತ್ತಪ್ಪ ಕೂಡ 17ರನ್ ಗಳಿಸಿ ಔಟಾದರು. ರಿಯಾನ್ ಪರಾಗ್ 16 ರನ್ ಗಳಿಸಿ ಔಟಾಗಿದ್ದು ಲೊಮ್ರೊರ್ 47 ರನ್ ಗಳಿಸುವ ಮೂಲಕ ಚಾಹಲ್ ಬೌಲಿಂಗ್ನಲ್ಲಿ ಔಟಾದರು.
ಕೊನೆ ಹಂತದಲ್ಲಿ ರಾಹುಲ್ ತಿವಾಟಿಯಾ ಹಾಗೂ ಜೋಫ್ರಾ ಆರ್ಚರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದು, ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡ 6 ವಿಕೆಟ್ ನಷ್ಟಕ್ಕೆ 154 ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಆರ್ಸಿಬಿ ತಂಡ ಆರಂಭದಲ್ಲಿ ಆರೊನ್ ಫಿಂಚ್ 8 ರನ್ ಗಳಿಸಿ ಶ್ರೇಯಸ್ ಗೋಪಾಲ್ ಬೌಲಿಂಗ್‌ನಲ್ಲಿ ಔಟಾದರು. ನಂತರ ಆರಂಭಿಕ ಆಟಗಾರ ದೇವದತ್ ಪಡಿಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಉತ್ತಮ ಜೊತೆಯಾಟವಾಡಿದರು.
45 ಎಸೆತಗಳಲ್ಲಿ 63 ರನ್ ಗಳಿಸಿದ್ದ ದೇವದತ್ ಪಡಿಕಲ್ ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಔಟಾದರು. ನಂತರ ವಿರಾಟ್ ಕೊಹ್ಲಿ ಜೊತೆ ಎಬಿ ಡಿ ವಿಲಿಯರ್ಸ್ ಕಣಕ್ಕಿಳಿದಿದ್ದು, ವಿರಾಟ್ ಕೊಹ್ಲಿ 53 ಎಸೆತಗಳಲ್ಲಿ (72)ರನ್ ಗಳಿಸಿದರೆ ಎಬಿ ಡಿ ವಿಲಿಯರ್ಸ್ 12 ರನ್ ಗಳಿಸಿದರು. 19.1 ಓವರ್ ನಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 158ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು. ಇದರಿಂದಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.