ಇಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ 19ನೇ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ವಿರಾಟ್ ಕೊಹ್ಲಿ ನಾಯಕತ್ವದ ಆರ್ ಸಿ ಬಿ ತಂಡ ಮುಖಾಮುಖಿಯಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ ಎಸ್ ಧೋನಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ 33 ರನ್ ಗಳಿಸಿ ಯುಜುವೇಂದ್ರ ಚಾಹಲ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಉತ್ತಮ ಜೊತೆಯಾಟವಾಡಿದ ಡುಪ್ಲೆಸಿಸ್ 50 ರನ್ ಹಾಗೂ ಸುರೇಶ್ ರೈನಾ 24 ರನ್ ಗಳಿಸಿದ್ದು 14ನೇ ಓವರ್ ನಲ್ಲಿ ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ಈ ಇಬ್ಬರು ಬ್ಯಾಟ್ಸ್ ಮನ್ ಗಳು ಔಟಾದರು. ಕೊನೆಯ ಹಂತದಲ್ಲಿ ರವೀಂದ್ರ ಜಡೇಜಾ ಭರ್ಜರಿ ಪ್ರದರ್ಶನ ತೋರಿದರು ಕೇವಲ 28 ಎಸೆತಗಳಲ್ಲಿ 62ರನ್ ಗಳಿಸಿದ್ದು, ಅಂತಿಮ ಓವರ್ ನಲ್ಲಿ 5 ಸಿಕ್ಸರ್ ಗಳನ್ನು ಬಾರಿಸಿದ್ದಾರೆ. ಒಟ್ಟಾರೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 4 ವಿಕೆಟ್ ನಷ್ಟಕ್ಕೆ 191ರನ್ ಗಳ ಮೊತ್ತ ದಾಖಲಿಸಿತು.
ಐಪಿಎಲ್ 2021: ಇಂದಿನ ಪಂದ್ಯದಲ್ಲಿ ಸುರೇಶ್ ರೈನಾ ಹೊಸ ದಾಖಲೆ
ಗುರಿ ಬೆನ್ನತ್ತಿದ ಆರ್ ಸಿ ಬಿ ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ 8ರನ್ ಗಳಿಸಿ ಔಟಾದರೆ ದೇವದತ್ ಪಡಿಕ್ಕಲ್ 34ರನ್ ಗಳಿಸಿದ್ದು, ಶಾರ್ದೂಲ್ ಠಾಕೂರ್ ಬೌಲಿಂಗ್ ನಲ್ಲಿ ಔಟಾದರು. ರವೀಂದ್ರ ಜಡೇಜಾ ಅವರ ಬೌಲಿಂಗ್ ದಾಳಿಗೆ ಆರ್ ಸಿ ಬಿ ತಂಡ ತತ್ತರಿಸಿ ಹೋಯಿತು, ಆರ್ ಸಿ ಬಿ ತಂಡ ಒಟ್ಟಾರೆ 9 ವಿಕೆಟ್ ನಷ್ಟಕ್ಕೆ 122ರನ್ ಗಳಿಸಿತು. ಈ ಮೂಲಕ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಆರ್ ಸಿ ಬಿ ವಿರುದ್ಧ 69ರನ್ ಗಳ ಭರ್ಜರಿ ಜಯ ಸಾಧಿಸಿದೆ. ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ರವೀಂದ್ರ ಜಡೇಜಾ ಪರಾಕ್ರಮ ಮೆರೆದಿದ್ದಾರೆ.