ಇಂದು ಸಿಡ್ನಿಯಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಆರೊನ್ ಫಿಂಚ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯ ತಂಡ, ಆರಂಭದಲ್ಲಿ ಡೇವಿಡ್ ವಾರ್ನರ್ ಹಾಗೂ ನಾಯಕ ಆರೊನ್ ಫಿಂಚ್ ಉತ್ತಮ ಜೊತೆಯಾಟವಾಡಿದರು.
ಆರಂಭಿಕ ಆಟಗಾರ ಡೇವಿಡ್ ವಾರ್ನರ್ 69 ರನ್ ಗಳಿಸಿ ಮೊಹಮ್ಮದ್ ಶಮಿ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸ್ಟೀವ್ ಸ್ಮಿತ್ ನಾಯಕ ಆರೊನ್ ಫಿಂಚ್ ಜೊತೆ ಸಾಥ್ ನೀಡಿದರು.
ನಾಯಕ ಆರೋನ್ ಫಿಂಚ್ ಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾದರು. ಆರೊನ್ ಫಿಂಚ್ 114 ರನ್ ಗಳಿಸಿದ್ದು ಜಸ್ ಪ್ರೀತ್ ಬುಮ್ರಾ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.
ನಂತರ ಬಂದ ಮಾರ್ಕೂಸ್ ಸ್ಟೊಯಿನಿಸ್ ಶೂನ್ಯಕ್ಕೆ ಔಟಾದರು. ಬಳಿಕ ಬಂದ ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 19 ಎಸೆತಗಳಲ್ಲಿ 45 ರನ್ ಗಳಿಸುವ ಮೂಲಕ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಔಟಾದರು.
ಆಸ್ಟ್ರೇಲಿಯಾ ತಂಡಕ್ಕೆ ಕೊನೆಯ ಹಂತದವರೆಗೂ ಬೆನ್ನೆಲುಬಾಗಿ ನಿಂತಿದ್ದ ಸ್ಟೀವ್ ಸ್ಮಿತ್ ಕೇವಲ 66 ಎಸೆತಗಳಲ್ಲಿ 105 ರನ್ ಗಳನ್ನು ಸಿಡಿಸಿದ್ದು ಕೊನೆಯ ಓವರ್ ನಲ್ಲಿ ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಬೋಲ್ಡ್ ಆದರು. ಒಟ್ಟಾರೆ ಆಸ್ಟ್ರೇಲಿಯಾ ತಂಡ 6 ವಿಕೆಟ್ ನಷ್ಟಕ್ಕೆ 374ರನ್ ಗಳ ಬೃಹತ್ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಭಾರತ ತಂಡದಲ್ಲಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 22ರನ್ ಗಳಿಸಿ ಹ್ಯಾಜೆಲ್ ವುಡ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ 21 ರನ್ ಗಳಿಸಿದ್ದು ಔಟಾದರು.
ನಂತರ ಶ್ರೇಯಸ್ ಅಯ್ಯರ್ ಕೇವಲ 2ರನ್ ಗಳಿಸಿ ಔಟಾದರೆ ಬಳಿಕ ಬಂದ ಕೆ.ಎಲ್. ರಾಹುಲ್ 12ರನ್ ಗಳಿಸಿದ್ದು ಆ್ಯಡಮ್ ಝಂಪಾಗೆ ತಮ್ಮ ವಿಕೆಟ್ ಒಪ್ಪಿಸಿದರು. ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಹಾರ್ದಿಕ್ ಪಾಂಡ್ಯ ಉತ್ತಮ ಜೊತೆಯಾಟವಾಡಿದರು.
ಶಿಖರ್ ಧವನ್ 74ರನ್ ಗಳಿಸಿದ್ದು ಆ್ಯಡಂ ಝಂಪಾ ಬೌಲಿಂಗ್‌ನಲ್ಲಿ ಔಟಾದರು. ನಂತರ ಹಾರ್ದಿಕ್ ಪಾಂಡ್ಯ ಕೂಡ 90ರನ್ ಗಳಿಸಿದ್ದು, ಆ್ಯಡಮ್ ಝಂಪ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಒಟ್ಟಾರೆ ಭಾರತ ತಂಡ 8 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿ ಗುರಿ ತಲುಪುವಲ್ಲಿ ವಿಫಲವಾಯಿತು.
ಈ ಮೂಲಕ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ 66ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ. 3ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ 1-0 ಇಂದ ಮುನ್ನಡೆ ಸಾಧಿಸಿದೆ.