ಮಾರಣಾಂತಿಕ ಕೊರೊನಾ ನಿಯಂತ್ರಣಕ್ಕಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಘೋಷಿಸಿದ್ದ ಕಾರಣ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದವು. ಆ ಬಳಿಕ ಲಾಕ್ಡೌನ್ ಸಡಿಲಿಕೆಯಾದರೂ ಕ್ರೀಡಾ ಕ್ಷೇತ್ರ ಹಾಗೂ ಮನೋರಂಜನಾ ಕ್ಷೇತ್ರ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ.
ಹೀಗಾಗಿ ಕ್ರೀಡಾಪಟುಗಳು ಯಾವುದೇ ಕ್ರೀಡಾಕೂಟಗಳು ಇಲ್ಲದ ಕಾರಣ ಮನೆಯಲ್ಲೇ ಕುಳಿತಿದ್ದಾರೆ. ಆದರೆ ಇತರೆ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದು, ಆ ಮೂಲಕವೇ ಕೋಟಿ ಕೋಟಿ ರೂಪಾಯಿ ಗಳಿಸುತ್ತಿದ್ದಾರೆ. ಹೌದು, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಮೂಲಕ ಈ ಕ್ರೀಡಾಪಟುಗಳು ಇಷ್ಟೊಂದು ಹಣ ಗಳಿಸಿದ್ದಾರೆ.
ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾರ್ಚ್ 12ರಿಂದ ಮೇ 14 ರ ಅವಧಿಯಲ್ಲಿ ಇನ್ಸ್ಟಾಗ್ರಾಮ್ ಪ್ರಾಯೋಜಿತ ಪೋಸ್ಟ್ ಗಳಿಂದ ಬರೋಬ್ಬರಿ 3.6 ಕೋಟಿ ರೂಪಾಯಿ ಗಳಿಸಿದ್ದು, ಟಾಪ್ 10 ಆಟಗಾರರ ಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿದ್ದಾರೆ.
ಇನ್ನುಳಿದಂತೆ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ 17.28 ಕೋಟಿ ರೂಪಾಯಿ ಗಳಿಕೆಯೊಂದಿಗೆ ಮೊದಲನೇ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಲಿಯೋನೆಲ್ ಮೆಸ್ಸಿ (11.52 ಕೋಟಿ ರೂಪಾಯಿ), ನೇಮರ್ (10.56 ಕೋಟಿ ರೂಪಾಯಿ), ಶಕೀಲ್ ಓ ನೀಲ್ (5.6 ಕೋಟಿ ರೂಪಾಯಿ), ಡೇವಿಡ್ ಬೆಕಮ್ (3.88 ಕೋಟಿ ರೂಪಾಯಿ), ವಿರಾಟ್ ಕೊಹ್ಲಿ (3.6 ಕೋಟಿ ರೂಪಾಯಿ), ಝಾಟಾನ್ ಇಬ್ರಾಹಿಮೊವಿಚ್ (1.75 ಕೋಟಿ ರೂಪಾಯಿ), ಅರೆಡ್ವೇನ್ ವೇಡ್ (1.37 ಕೋಟಿ ರೂಪಾಯಿ), ಡಾನಿ ಅಲ್ವೆಸ್ (1.28 ಕೋಟಿ ರೂಪಾಯಿ) ಹಾಗೂ ಅಂತೋನಿ ಜೋಶುವಾ (1.16 ಕೋಟಿ ರೂಪಾಯಿ) ಗಳಿಸಿದ್ದಾರೆ.