ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಐಪಿಎಲ್ ನ 21ನೇ ಪಂದ್ಯದಲ್ಲಿ ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದು, ಕೆಕೆಆರ್ ತಂಡದ ನಾಯಕ ಇಯಾನ್ ಮೋರ್ಗನ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದಲ್ಲಿ ಆರಂಭಿಕ ಆಟಗಾರ ಕೆ ಎಲ್ ರಾಹುಲ್ 19ರನ್ ಗಳಿಸಿ ಪ್ಯಾಟ್ ಕಮಿನ್ಸ್ ಗೆ ತಮ್ಮ ವಿಕೆಟ್ ಒಪ್ಪಿಸಿದರು ಬಳಿಕ ಬಂದ ಕ್ರಿಸ್ ಗೇಲ್ ಶೂನ್ಯಕ್ಕೆ ಔಟಾದರೆ, ದೀಪಕ್ ಹೂಡಾ 1ರನ್ ಗಳಿಸಿ ಪ್ರಸಿದ್ದ್ ಕೃಷ್ಣಗೆ ತಮ್ಮ ವಿಕೆಟ್ ಒಪ್ಪಿಸಿದರು.
ನಂತರ ಮಯಾಂಕ್ ಅಗರ್ವಾಲ್ ಕೂಡ 31ರನ್ ಗಳಿಸಿದ್ದು ಸುನಿಲ್ ನರೇನ್ ಬೌಲಿಂಗ್ ನಲ್ಲಿ ಔಟಾದರು, ಪಂಜಾಬ್ ಕಿಂಗ್ಸ್ ತಂಡ ತನ್ನ ಸತತ ವಿಕೆಟ್ ಗಳನ್ನು ಕಳೆದುಕೊಂಡು 9 ವಿಕೆಟ್ ನಷ್ಟಕ್ಕೆ 123ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಕೆಕೆಆರ್ ತಂಡ ಆರಂಭದಲ್ಲಿ ನಿತೀಶ್ ರಾಣ ಶೂನ್ಯಕ್ಕೆ ಔಟಾದರೆ, ಶುಭ್ ಮನ್ ಗಿಲ್ 9ರನ್ ಗಳಿಸಿದ್ದು, ಮೊಹಮ್ಮದ್ ಶಮಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಾಯಕ ಇಯಾನ್ ಮೋರ್ಗನ್ 47ರನ್ ಗಳಿಸುವ ಮೂಲಕ ಕೊನೆಯ ಹಂತದವರೆಗೂ ಕೆಕೆಆರ್ ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಕೆಕೆಆರ್ ತಂಡ 16.4 ಓವರ್ ಗಳಲ್ಲಿ 126ರನ್ ಗಳಿಸಿತು. ಈ ಮೂಲಕ ಪಂಜಾಬ್ ಕಿಂಗ್ಸ್ ವಿರುದ್ಧ ಕೆಕೆಆರ್ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.