ಇಂದು ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ನಡುವಣ ನಡೆದ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕ ಕೈರನ್ ಪೊಲಾರ್ಡ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಆರಂಭದಲ್ಲಿ ಗುಣತಿಲಕ 4ರನ್ ಗಳಿಸಿ ಕೆವಿನ್ ಸಿಂಕ್ಲೇರ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಆರಂಭಿಕ ಆಟಗಾರ ಡಿಕ್ವೆಲ್ಲಾ ಹಾಗೂ ಪಾತುಮ್ ನಿಸಂಕ ಅವರ ಜೊತೆಯಾಟದಿಂದ ಶ್ರೀಲಂಕಾ ತಂಡ ಸ್ವಲ್ಪ ಸುಧಾರಣೆ ಕಂಡಿತು. ಬಳಿಕ ಡಿಕ್ವೆಲ್ಲಾ 33ರನ್ ಗಳಿಸಿದ್ದು ಜೇಸನ್ ಹೋಲ್ಡರ್ ಬೌಲಿಂಗ್‌ನಲ್ಲಿ ನಲ್ಲಿ ಔಟಾದರು. ಪಾತುಮ್ ನಿಸಂಕ ಕೂಡ 39ರನ್ ಗಳಿಸಿ ಅಲೆನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಯಾವ ಬ್ಯಾಟ್ಸ್‌ಮನ್ ಗಳಿಂದಲೂ ಉತ್ತಮ ಪ್ರದರ್ಶನ ದೊರೆಯಲಿಲ್ಲ. ಶ್ರೀಲಂಕಾ ತಂಡ ಒಟ್ಟಾರೆ 9 ವಿಕೆಟ್ ನಷ್ಟಕ್ಕೆ 131 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು.
ಒಂದೇ ಓವರ್ನಲ್ಲಿ ಆರು ಸಿಕ್ಸರ್ ಸಿಡಿಸಿದ ಪೋಲಾರ್ಡ್ಗೆ ಶುಭಾಶಯಗಳ ಸುರಿಮಳೆ
ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡ ಆರಂಭದಲ್ಲಿ ಸೈಮನ್ಸ್ ಹಾಗೂ ಎವಿನ್ ಲೆವಿಸ್ ಭರ್ಜರಿ ಜೊತೆಯಾಟವಾಡಿದರು. ನಂತರ 4 ನೇ ಓವರ್ ನಲ್ಲಿ ಬೌಲಿಂಗ್ ಮಾಡಿದ ಧನಂಜಯ ಸತತವಾಗಿ 3ವಿಕೆಟ್ ಗಳನ್ನು ತೆಗೆಯುವ ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದರು. ಬಳಿಕ ಬಂದ ನಾಯಕ ಕೈರನ್ ಪೊಲಾರ್ಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ವೆಸ್ಟ್ ಇಂಡೀಸ್ ಗೆ ಆಸರೆಯಾದರು.
ಕೈರನ್ ಪೊಲಾರ್ಡ್ 38ರನ್ ಗಳಿಸಿದ್ದು ಹಸರಂಗ ಅವರಿಗೆ ವಿಕೆಟ್ ಒಪ್ಪಿಸಿದರು. ಕೊನೆಯ ಹಂತದಲ್ಲಿ ಜೇಸನ್ ಹೋಲ್ಡರ್ ಹಾಗೂ ಡ್ವೇನ್ ಬ್ರಾವೋ ವೆಸ್ಟ್ ಇಂಡೀಸ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ವೆಸ್ಟ್ ಇಂಡೀಸ್ ತಂಡ 6 ವಿಕೆಟ್ ನಷ್ಟಕ್ಕೆ 134ರನ್ ಗಳಿಸಿತು ಈ ಮೂಲಕ ವೆಸ್ಟ್ ಇಂಡೀಸ್ ತಂಡ ಶ್ರೀಲಂಕಾ ವಿರುದ್ಧ 4 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು. 3ಟಿ ಟ್ವೆಂಟಿ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡ 1-0 ಮುನ್ನಡೆ ಸಾಧಿಸಿದೆ