ಇಂದು ಕ್ಯಾನ್ ಬೆರಾದಲ್ಲಿ ನಡೆದ ಮೊದಲನೇ ಟಿ ಟ್ವೆಂಟಿ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಆರೊನ್ ಫಿಂಚ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭದಲ್ಲಿ ಶಿಖರ್ ಧವನ್ ಕೇವಲ 1 ರನ್ ಗಳಿಸಿ ಮಿಚೆಲ್ ಸ್ಟಾರ್ಕ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿರಾಟ್ ಕೊಹ್ಲಿ 9ರನ್ ಗಳಿಸಿ ಔಟಾದರೆ ಸಂಜು ಸಾಮ್ಸನ್ 23ರನ್ ಗಳಿಸಿದ್ದು ಹೆನ್ರಿಕ್ಸ್ ಬೌಲಿಂಗ್ನಲ್ಲಿ ಔಟಾದರು.
ಬಳಿಕ ಬಂದ ಮನೀಶ್ ಪಾಂಡೆ ಕೇವಲ 2ರನ್ ಗಳಿಸಿದ್ದು ಆ್ಯಡಂ ಝಂಪಾಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಟೀಂ ಇಂಡಿಯಾಗೆ ಆಸರೆಯಾಗಿದ್ದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ 51ರನ್ ಗಳಿಸಿದ್ದು, ಹೆನ್ರಿಕ್ಸ್ ಬೌಲಿಂಗ್ನಲ್ಲಿ ಔಟಾದರು. ರವೀಂದ್ರ ಜಡೇಜಾ 23 ಎಸೆತಗಳಲ್ಲಿ (46) ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು. ಇವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಒಟ್ಟಾರೆ 7 ವಿಕೆಟ್ ನಷ್ಟಕ್ಕೆ 161ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲಿ ನಾಯಕ ಆರೊನ್ ಫಿಂಚ್ 35ರನ್ ಗಳಿಸಿ ಚಹಲ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಬಂದ ಸ್ಟೀವ್ ಸ್ಮಿತ್ 12ರನ್ ಗಳಿಸಿ ಔಟಾದರೆ ಗ್ಲೆನ್ ಮ್ಯಾಕ್ಸ್ವೆಲ್ ಕೇವಲ 2 ರನ್ ಗಳಿಸಿ ನಟರಾಜನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು.
ನಂತರ ಆರಂಭಿಕ ಆಟಗಾರ ಡಾರ್ಸಿ ಶಾರ್ಟ್ 34ರನ್ ಗಳಿಸಿದ್ದು ನಟರಾಜನ್ ಬೌಲಿಂಗ್ನಲ್ಲಿ ಔಟಾದರು. ಆಸ್ಟ್ರೇಲಿಯಾ ತಂಡ 7 ವಿಕೆಟ್ ನಷ್ಟಕ್ಕೆ 150ರನ್ ಗಳಿಸಿ ಗುರಿ ತಲುಪುವಲ್ಲಿ ವಿಫಲವಾಯಿತು. ಈ ಮೂಲಕ ಭಾರತ ತಂಡ ಟಿ ಟ್ವೆಂಟಿ ಸರಣಿಯ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 11ರನ್ ಗಳಿಂದ ಜಯ ಸಾಧಿಸಿದ್ದು 3 ಟಿ ಟ್ವೆಂಟಿ ಪಂದ್ಯದಲ್ಲಿ 1-0 ಮುನ್ನಡೆ ಸಾಧಿಸಿದೆ.