ಶನಿವಾರದಂದು ದುಬೈನಲ್ಲಿ ನಡೆದ ಐಪಿಎಲ್ ನ 25ನೇ ಪಂದ್ಯದಲ್ಲಿ ಆರ್.ಸಿ.ಬಿ. ತಂಡದ ನಾಯಕ ವಿರಾಟ್ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ಆರಂಭದಲ್ಲಿ ಆರೊನ್ ಫಿಂಚ್ ಕೇವಲ 2 ರನ್ ಗಳಿಸಿ ದೀಪಕ್ ಚಹಾರ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ದೇವದತ್ ಪಡಿಕಲ್ 33ರನ್ ಗಳಿಸಿ ಔಟಾಗಿದ್ದು, ನಾಯಕ ವಿರಾಟ್ ಕೊಹ್ಲಿ ಕೊನೆಯ ಹಂತದವರೆಗೂ ಆರ್.ಸಿ.ಬಿ. ತಂಡಕ್ಕೆ ಬೆನ್ನೆಲುಬಾಗಿ ನಿಂತರು. ಎಬಿಡಿ ವಿಲಿಯರ್ಸ್ ಶೂನ್ಯ ರನ್ ಗೆ ಶಾರ್ದುಲ್ ಠಾಕೂರ್ ಬೌಲಿಂಗ್ ನಲ್ಲಿ ಔಟಾದರು. ನಾಯಕ ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ 90 ರನ್ ಗಳಿಸುವ ಮೂಲಕ ಅಜೇಯರಾಗಿ ಉಳಿದರು. ಈ ಮೂಲಕ ಆರ್.ಸಿ.ಬಿ. ತಂಡ 4 ವಿಕೆಟ್ ನಷ್ಟಕ್ಕೆ 169ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆರಂಭದಲ್ಲಿ ಪಾಫ್ ಡುಪ್ಲೆಸಿಸ್ 8ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಆರಂಭಿಕ ಆಟಗಾರ ಶೇನ್ ವಾಟ್ಸನ್ 14ರನ್ ಗಳಿಸಿ ಔಟಾಗಿದ್ದು, ಅಂಬಟಿ ರಾಯ್ಡು ಹಾಗೂ ಜಗದೀಸನ್ ಅವರ ಜೊತೆಯಾಟದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸ್ವಲ್ಪ ಸುಧಾರಣೆ ಕಂಡಿತು.
ನಂತರ ಜಗದೀಸನ್ 33ರನ್ ಗಳಿಸಿ ರನ್ ಔಟಾಗಿದ್ದು, ಬಳಿಕ ಬಂದ ನಾಯಕ ಎಂಎಸ್ ಧೋನಿ 10 ರನ್ ಗಳಿಸಿ ಚಾಹಲ್ ಬೌಲಿಂಗ್ನಲ್ಲಿ ಔಟಾದರು. ನಂತರ ಬಂದ ಸ್ಯಾಮ್ ಕರನ್ ಶೂನ್ಯಕ್ಕೆ ಔಟಾಗಿದ್ದು, ಚೆನ್ನೈ ಸೂಪರ್ಕಿಂಗ್ಸ್ ತಂಡಕ್ಕೆ ಆಸರೆಯಾಗಿದ್ದ ಅಂಬಟ್ಟಿ ರಾಯ್ಡು 42ರನ್ ಗಳಿಸಿ ಉಡಾನ ಬೌಲಿಂಗ್ನಲ್ಲಿ ಔಟಾದರು. ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ ನಷ್ಟಕ್ಕೆ 132ರನ್ ಗಳಿಸಿ ಗುರಿ ತಲುಪುವಲ್ಲಿ ವಿಫಲವಾಯಿತು. ಈ ಮೂಲಕ ಆರ್.ಸಿ.ಬಿ. ತಂಡ ಚೆನ್ನೈ ಸೂಪರ್ಕಿಂಗ್ಸ್ ವಿರುದ್ಧ 37ರನ್ ಗಳ ಜಯ ಸಾಧಿಸಿತು.