ಶುಕ್ರವಾರ ದುಬೈನಲ್ಲಿ ನಡೆದ ಐಪಿಎಲ್ ನ 14 ಪಂದ್ಯದಲ್ಲಿ ಸನ್ ರೈಸರ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಆಟಗಾರರಾದ ಜಾನಿ ಬೈರ್ ಸ್ಟೋವ್ ಶೂನ್ಯಕ್ಕೆ ಔಟಾದರು. ನಂತರ ಬಂದ ಮನೀಶ್ ಪಾಂಡೆ 29 ರನ್ ಗಳಿಸಿ ಔಟಾಗಿದ್ದು, ಬಳಿಕ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ 28 ರನ್ ಗಳಿಸಿ ಪಿಯೂಶ್ ಚಾವ್ಲಾ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ಕೇನ್ ವಿಲಿಯಮ್ಸನ್ ಕೇವಲ 9 ರನ್ ಗಳಿಸುವ ಮೂಲಕ ರನ್ ಔಟ್ ಆಗಿದ್ದು, ಪ್ರಿಯಮ್ ಗರ್ಗ್ 26 ಎಸೆತಗಳಲ್ಲಿ (51) ರನ್ ಗಳಿಸುವ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಕೊನೆಯ ಹಂತದವರೆಗೂ ಬೆನ್ನೆಲುಬಾಗಿ ನಿಂತರು. ಒಟ್ಟಾರೆ ಸನ್ ರೈಸರ್ಸ್ ಹೈದರಾಬಾದ್ ತಂಡ 5 ವಿಕೆಟ್ ನಷ್ಟಕ್ಕೆ 164 ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಆರಂಭದಲ್ಲಿ ಶೇನ್ ವಾಟ್ಸನ್ ಕೇವಲ 1 ರನ್ ಗಳಿಸಿ ಭುವನೇಶ್ವರ್ ಕುಮಾರ್ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಂಬಟಿ ರಾಯ್ಡು 8 ರನ್ ಗಳಿಸಿ ನಟರಾಜನ್ ಬೌಲಿಂಗ್‌ನಲ್ಲಿ ಔಟಾದರು. ಬಳಿಕ ಆರಂಭಿಕ ಆಟಗಾರ ಫಾಫ್ ಡುಪ್ಲೆಸಿಸ್ 22 ರನ್ ಗಳಿಸಿದ್ದು, ರನ್ ಔಟ್ ಆದರು. ಕೇದಾರ್ ಜಾಧವ್ ಕೂಡ ಕೇವಲ 3 ರನ್ ಗಳಿಸಿ ಔಟಾದರು. ನಾಯಕ ಎಂ.ಎಸ್. ಧೋನಿ ಹಾಗೂ ರವೀಂದ್ರ ಜಡೇಜಾ ಉತ್ತಮ ಜೊತೆಯಾಟವಾಡಿದ್ದು, ರವೀಂದ್ರ ಜಡೇಜಾ 50ರನ್ ಗಳಿಸುವ ಮೂಲಕ ಕೊನೆ ಹಂತದಲ್ಲಿ ಔಟಾದರು.ನಂತರ ಎಂಎಸ್ ಧೋನಿ ಹಾಗೂ ಸ್ಯಾಮ್ ಕರನ್ ಗೆಲುವಿಗಾಗಿ ಹೋರಾಟ ನಡೆಸಿದರೂ ಗುರಿ ತಲುಪುವಲ್ಲಿ ವಿಫಲರಾದರು. ಚೆನ್ನೈ ಸೂಪರ್‌ಕಿಂಗ್ಸ್ ತಂಡ 5 ವಿಕೆಟ್ ನಷ್ಟಕ್ಕೆ 157ರನ್ ಗಳಿಸಿದ್ದು, ಈ ಮೂಲಕ ಸನ್ ರೈಸರ್ಸ್ ಹೈದ್ರಾಬಾದ್ ತಂಡ 7 ರನ್ ಗಳ ರೋಚಕ ಜಯ ಸಾಧಿಸಿತು.