ಫಿಟ್ನೆಸ್ ಮತ್ತು ಆಟದ ಮೇಲಿನ ಬದ್ಧತೆಗೆ ಅನ್ವರ್ಥರಾಗಿದ್ದ ಕಪಿಲ್ ದೇವ್, ಈ ವಿಚಾರದಲ್ಲಿ ಇವತ್ತಿನ ಯೋ-ಯೋ ಟೆಸ್ಟ್ ಯುಗದ ಆಟಗಾರರನ್ನೂ ಮೀರಿಸುವಂಥ ಬಲಾಢ್ಯರು ಅಂದರೆ ಅತಿಶಯೋಕ್ತಿಯಲ್ಲ.
1980-81ರ ಆಸ್ಟ್ರೇಲಿಯಾ ಪ್ರವಾಸದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತದ 2-3 ಬೌಲರ್‌ಗಳು ಗಾಯಗೊಂಡಿದ್ದರು. ಅವರಲ್ಲಿ ಕಪಿಲ್ ಸಹ ಒಬ್ಬರು. ಪಂದ್ಯ ಗೆಲ್ಲಲು 143 ರನ್‌ಗಳ ಅಲ್ಪ ಮೊತ್ತ ಬೆನ್ನತ್ತಿದ್ದ ಆಸ್ಟ್ರೇಲಿಯಾ, ಭಾರತದ ವೇಗಿ ಗಾವ್ರಿ ಶಿಸ್ತಿನ ಬೌಲಿಂಗ್ ಮೋಡಿಗೆ 11 ರನ್ ಆಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ನಾಲ್ಕನೇ ದಿನ ಅಂತ್ಯ ಕಾಣುತ್ತದೆ.
ಪಂದ್ಯದಲ್ಲಿ ಜೀವಂತಿಕೆ ಇದೆ ಎಂದು ಅರಿತ ಕಪಿಲ್ ದೇವ್, ಗಾಯದ ನೋವಿನ ನಡುವೆಯೂ 16.4 ಓವರ್‌ಗಳನ್ನು ಸತತವಾಗಿ ಹಾಕಿದ್ದಲ್ಲದೇ, 28ರನ್ನಿತ್ತು 5 ವಿಕೆಟ್ ಪಡೆದುಕೊಂಡು ಎದುರಾಳಿಗಳನ್ನು 83 ರನ್‌ಗಳಿಗೆ ಕಟ್ಟಿ ಹಾಕಿದ್ದರು. ಈ ಮೂಲಕ ಆಸೀಸ್ ನೆಲದಲ್ಲಿ ಅಪರೂಪದ ಟೆಸ್ಟ್ ಗೆಲುವೊಂದು ಭಾರತದ ಪಾಲಾಗಿತ್ತು.