ಸಾವು ಯಾವ ರೂಪದಲ್ಲಿ, ಯಾವ ಸಂದರ್ಭದಲ್ಲಿ ಬರುತ್ತದೆ ಎಂಬುದನ್ನು ಹೇಳಲು ಯಾರಿಗೂ ಸಾಧ್ಯವಿಲ್ಲ. ಇದಕ್ಕೆ ಇನ್ನೊಂದು ಸೇರ್ಪಡೆ ಎಂಬಂತೆ ಕ್ರಿಕೆಟ್ ಆಡುವಾಗಲೇ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿ ಹಳೆನಗರದ ಭೂತನಗುಡಿ ನಿವಾಸಿ 38 ವರ್ಷದ ದಿನೇಶ್ ರಾವ್ ಮೃತ ದುರ್ದೈವಿಯಾಗಿದ್ದು, ಇವರು ಭಾನುವಾರದಂದು ನ್ಯೂಟೌನ್ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟದಲ್ಲಿ ಆಟವಾಡುತ್ತಿದ್ದರು.
ಈ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದ ಅವರನ್ನು ಪರೀಕ್ಷಿಸಿದಾಗ ಹೃದಯಾಘಾತದಿಂದ ಸಾವನ್ನಪ್ಪಿರುವುದು ತಿಳಿದುಬಂದಿದೆ. ಭದ್ರಾವತಿ ನಗರಸಭೆಯಲ್ಲಿ ಅವರು ಹೊರಗುತ್ತಿಗೆ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದರು.