ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮದುವೆಯಾಗಿ ಖುಷಿಯಾಗಿದ್ದಾರೆ. ಆದ್ರೆ ಪ್ರೀತಿಯಲ್ಲಿದ್ದ ಸಂದರ್ಭದಲ್ಲಿ ಕೊಹ್ಲಿ ಮದುವೆಯಾಗಲು ಅನುಷ್ಕಾ ಸಿದ್ಧರಿರಲಿಲ್ಲವಂತೆ. ಇದೇ ವಿಷ್ಯಕ್ಕೆ ಇಬ್ಬರ ಮಧ್ಯೆ ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು.
ಇತ್ತೀಚಿನ ದಿನಗಳಲ್ಲಿ ಅನುಷ್ಕಾ ಮಾತ್ರವಲ್ಲ ಅನೇಕ ಹುಡುಗಿಯರು ಪ್ರೀತಿ ಮಾಡ್ತಾರೆ. ಆದ್ರೆ ಮದುವೆ ಹೆಸರು ಕೇಳ್ತಿದ್ದಂತೆ ಓಟ ಶುರು ಮಾಡ್ತಾರೆ. ಇದಕ್ಕೆ ಅನೇಕ ಕಾರಣವಿದೆ.
ಹಿಂದೆ ಮಗಳು ದೊಡ್ಡವಳಾಗ್ತಿದ್ದಂತೆ ಅವಳ ಮದುವೆ ಬಗ್ಗೆ ಆಲೋಚನೆ ಮಾಡ್ತಿದ್ದರು. ಆದ್ರೀಗ ಪಾಲಕರ ಆಲೋಚನೆ ಬದಲಾಗಿದೆ. ಮನೆ ಮಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಮಗಳಿನ ಓದು ಹಾಗೂ ವೃತ್ತಿಗೆ ಮಹತ್ವ ನೀಡಲಾಗ್ತಿದೆ. ಮದುವೆಯ ಅಂತಿಮ ತೀರ್ಮಾನವನ್ನೂ ಮಗಳ ಮೇಲೆ ಬಿಟ್ಟಿದ್ದಾರೆ.
ಉತ್ತಮ ಶಿಕ್ಷಣ ಮತ್ತು ಪೋಷಕರ ಬದಲಾಗುತ್ತಿರುವ ಆಲೋಚನೆಯಿಂದಾಗಿ, ಹುಡುಗಿಯರು ಸ್ವತಂತ್ರರಾಗಲು ಅವಕಾಶವನ್ನು ಪಡೆಯುತ್ತಿದ್ದಾರೆ. ಮದುವೆ ಬಗ್ಗೆ ಕನಸು ಕಾಣ್ತಿದ್ದ ಹುಡುಗಿಯರು ಈಗ ವೃತ್ತಿ, ಯಶಸ್ಸಿನ ಬಗ್ಗೆ ಕನಸು ಕಾಣ್ತಿದ್ದಾರೆ. ವಿಶೇಷವಾಗಿ ಆರ್ಥಿಕವಾಗಿ ಸ್ವತಂತ್ರರಾಗಿರುವುದು ಅವರ ಮೊದಲ ಆದ್ಯತೆಯಾಗಿದೆ.
ಸಮಯ ಎಷ್ಟೇ ಬದಲಾದರೂ, ಇಂದಿಗೂ ಹೆಚ್ಚಿನ ಮನೆಗಳಲ್ಲಿ ಹುಡುಗಿಯರು ಮದುವೆಯ ನಂತರ ಮನೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಈ ಕಾರಣದಿಂದಾಗಿ ಕಚೇರಿಯಲ್ಲಿ ಉತ್ತಮ ಪ್ರದರ್ಶನ ನೀಡುವುದಿಲ್ಲ.ಸಂಬಂಧ ಹಾಳಾಗ್ತಿದೆ. ಒತ್ತಡ ಜಾಸ್ತಿಯಾಗ್ತಿದೆ. ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ದಣಿಸುತ್ತದೆ. ಇದ್ರಿಂದ ತಪ್ಪಿಸಿಕೊಳ್ಳಲು ಹುಡುಗಿಯರು ಮದುವೆ ಬೇಡ ಎನ್ನುತ್ತಿದ್ದಾರೆ.
ಮದುವೆ ನಂತ್ರ ಕೆಲಸ ಬಿಡುವಂತೆ ಒತ್ತಡ ಹೆಚ್ಚಾಗುತ್ತದೆ. ಮಗುವಾದ್ಮೇಲೆ ಅದ್ರ ಪಾಲನೆ, ಪತ್ನಿ, ಕುಟುಂಬಸ್ಥರ ಕಾರಣ ಅನಿವಾರ್ಯವಾಗಿ ಕೆಲಸ ಬಿಡಬೇಕು. ಕಚೇರಿ ವಾತಾವರಣ, ಕೆಲಸ ಬಿಟ್ಟ ಮಹಿಳೆಯರಿಗೆ ಎಲ್ಲವನ್ನೂ ಕಳೆದುಕೊಂಡ ಅನುಭವವಾಗುತ್ತದೆ. ದೀರ್ಘಕಾಲ ಸಂಬಂಧದಲ್ಲಿದ್ದರೂ ಯುವತಿಯರು ಮದುವೆ ಬೇಡ ಎನ್ನುತ್ತಿದ್ದಾರೆ. ಹಾಗೆ ಹುಡುಗಿಯರು ತಮ್ಮ ಕೆಲಸಕ್ಕೆ ಬೆಂಬಲ ನೀಡುವ ಹುಡುಗರ ಹುಡುಕಾಟ ನಡೆಸುತ್ತಿದ್ದಾರೆ.