ಬುಧವಾರ ಅಬುದಾಬಿಯಲ್ಲಿ ನಡೆದ ಐಪಿಎಲ್ ನ 5ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಕೇವಲ 1ರನ್ ಗಳಿಸಿ ಔಟಾದರು. ನಂತರ ನಾಯಕ ರೋಹಿತ್ ಶರ್ಮ ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟದಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ನೆರವಾದರು.
47ರನ್ ಗಳಿಸಿದ ಸೂರ್ಯ ಕುಮಾರ್ ಯಾದವ್ ರನ್ ಔಟ್ ಆಗಿದ್ದು, ನಂತರ ಕಣಕ್ಕಿಳಿದ ಸೌರಬ್ ತಿವಾರಿ 21 ರನ್ ಗಳಿಸಿ ಔಟಾದರು. ಮುಂಬೈ ಇಂಡಿಯನ್ಸ್ ಗೆ ಬೆನ್ನೆಲುಬಾಗಿ ನಿಂತಿದ್ದ ನಾಯಕ ರೋಹಿತ್ ಶರ್ಮ (54 ಎಸೆತಗಳಲ್ಲಿ 84 ರನ್) ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 6 ಭರ್ಜರಿ ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸುವ ಮೂಲಕ ಶಿವಂ ಮಾವಿ ಅವರ ಬೌಲಿಂಗ್ ನಲ್ಲಿ ಔಟಾದರು. ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್ ನಷ್ಟಕ್ಕೆ 195 ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಕೆಕೆಆರ್ ಆರಂಭದಲ್ಲಿ ಶುಭಮನ್ ಗಿಲ್ 7 ರನ್ ಗೆ ಔಟಾದರು. ಸುನೀಲ್ ನರೈನ್ ಕೂಡ 9 ರನ್ ಗಳಿಸಿ ಔಟಾದರು. ನಂತರ ನಾಯಕ ದಿನೇಶ್ ಕಾರ್ತಿಕ್ ಹಾಗೂ ನಿತೀಶ್ ರಾಣಾರವರ ಜೊತೆ ಆಟವು ಬಹಳ ಹೊತ್ತು ನಿಲ್ಲಲಿಲ್ಲ. ದಿನೇಶ್ ಕಾರ್ತಿಕ್ 33ರನ್ ಗಳಿಸಿ ರಾಹುಲ್ ಚಾಹರ್ ಬೌಲಿಂಗ್ನಲ್ಲಿ ಔಟಾದರು.
ಬಳಿಕ 24 ರನ್ ಗಳಿಸಿದ ನಿತೀಶ್ ರಾಣ ಕೂಡ ತಮ್ಮ ವಿಕೆಟ್ ಒಪ್ಪಿಸಿದ್ದು, ಆ ನಂತರ ಯಾವ ಆಟಗಾರನು ಕ್ರೀಸ್ ನಲ್ಲಿ ಬಹಳ ಹೊತ್ತು ನಿಲ್ಲಲಿಲ್ಲ. ಬೌಲರ್ ಪ್ಯಾಟ್ ಕಮಿನ್ಸ್ ಕೊನೆಯ ಹಂತದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. 12 ಎಸೆತಗಳಲ್ಲಿ (33)ರನ್ ಗಳಿಸಿ ನಂತರ ಔಟಾದರು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದು, ಈ ಮೂಲಕ ಮುಂಬೈ ಇಂಡಿಯನ್ಸ್ 49 ರನ್ ಗಳ ಭರ್ಜರಿ ಜಯ ದಾಖಲಿಸಿತು.