ಇಂದು ಅಬುಧಾಬಿಯಲ್ಲಿ ನಡೆದ ಐಪಿಎಲ್ ನ 24ನೇ ಪಂದ್ಯದಲ್ಲಿ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡದಲ್ಲಿ ಆರಂಭಿಕ ಆಟಗಾರರಾದ ರಾಹುಲ್ ತ್ರಿಪಾಠಿ ಕೇವಲ 4ರನ್ ಗಳಿಸಿ ಮಹಮ್ಮದ್ ಶಮಿ ಬೌಲಿಂಗ್ನಲ್ಲಿ ಔಟಾದರು.
ನಂತರ ಬಂದ ನಿತೀಶ್ ರಾಣಾ ಕೂಡ 2ರನ್ ಗಳಿಸಿ ರನ್ ಔಟಾದರು. ಇಯಾನ್ ಮಾರ್ಗನ್ 24 ರನ್ ಗಳಿಸಿ, ಔಟಾಗಿದ್ದು, ಆರಂಭಿಕ ಆಟಗಾರ ಶುಭಮನ್ ಗಿಲ್ 47 ಎಸೆತಗಳಲ್ಲಿ (57)ರನ್ ಗಳಿಸಿ ರನ್ ಔಟ್ ಆದರು.
ನಂತರ ಆಂಡ್ರೆ ರಸ್ಸೆಲ್ ಕೇವಲ 5ರನ್ ಗಳಿಸಿ ಔಟಾಗಿದ್ದು, ಬಳಿಕ ನಾಯಕ ದಿನೇಶ್ ಕಾರ್ತಿಕ್ 29 ಎಸೆತಗಳಲ್ಲಿ (58)ರನ್ ಗಳಿಸುವ ಮೂಲಕ ಕೊನೆಯ ಓವರ್ ನಲ್ಲಿ ಔಟಾದರು. ಒಟ್ಟಾರೆ ಕೆಕೆಆರ್ ತಂಡ 6 ವಿಕೆಟ್ ನಷ್ಟಕ್ಕೆ 164ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಆರಂಭಿಕ ಆಟಗಾರರಾದ ನಾಯಕ ಕೆ..ಎಲ್. ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಜೊತೆಯಾಟವಾಡಿದರು. ಮಯಾಂಕ್ ಅಗರ್ವಾಲ್ 39 ಎಸೆತಗಳಲ್ಲಿ (56)ರನ್ ಗಳಿಸಿದ್ದು, ಪ್ರಸಿದ್ಧ್ ಕೃಷ್ಣ ಅವರಿಗೆ ತಮ್ಮ ವಿಕೆಟ್ ಒಪ್ಪಿಸಿದರು.
ನಂತರ ಬಂದ ನಿಕೋಲಸ್ ಪೂರನ್ 16 ರನ್ ಗಳಿಸಿ ಔಟಾದರು. ಬಳಿಕ ಬಂದ ಸಿಮ್ರಾನ್ ಸಿಂಗ್ ಕೂಡ 4ರನ್ ಗಳಿಸಿ ಔಟಾದರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದ ಆರಂಭಿಕ ಆಟಗಾರ ನಾಯಕ ಕೆಎಲ್ ರಾಹುಲ್ 58 ಎಸೆತಗಳಲ್ಲಿ (74)ರನ್ ಗಳಿಸಿದ್ದು, ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಔಟಾದರು.
ಈ ಮೂಲಕ ಕಿಂಗ್ಸ್ ಇಲೆವೆನ್ ತಂಡ 5 ವಿಕೆಟ್ ನಷ್ಟಕ್ಕೆ 162ರನ್ ಗಳಿಸಿತು. ಇದರಿಂದಾಗಿ ಕೆಕೆಆರ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೇವಲ 2 ರನ್ ಗಳಿಂದ ರೋಚಕ ಜಯ ಸಾಧಿಸಿತು.